

ಉಡುಪಿ: ಜಿಲ್ಲೆಯಲ್ಲಿ ಜ.1ರಿಂದ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿ ಆರಂಭವಾಗಲಿದ್ದು, ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸಜ್ಜಾಗಿವೆ.
ಜಿಲ್ಲೆಯ ಎಲ್ಲ ಶಾಲೆ ಮತ್ತು ದ್ವಿತೀಯ ಪಿಯು ಕಾಲೇಜು ಸ್ವಚ್ಛತಾ ಮತ್ತು ಸ್ಯಾನಿಟೈಸ್ ಕಾರ್ಯ ಕಳೆದ ಮೂರ್ನಾಲ್ಕು ದಿನಗಳಿಂದ ನಡೆದಿದೆ. ನಗರದಲ್ಲಿ ಬೋರ್ಡ್ ಹೈಸ್ಕೂಲು, ನಗರ ಸರ್ಕಾರಿ ಒಳಕಾಡು ಪ್ರೌಢಶಾಲೆಯಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಕುರಿತಾಗಿ ಸಿದ್ಧತಾ ಕಾರ್ಯಗಳು ಬುಧವಾರ ನಡೆದಿವೆ. ಕೆಲವು ಶಿಕ್ಷಕರು ಚುನಾವಣೆ ಕರ್ತವ್ಯದಲ್ಲೇ ಇದ್ದು, ಉಳಿದವರು ಶಾಲೆಗೆ ಆಗಮಿಸಿ ಕೆಲಸ, ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಸ್ವತಃ ಶಿಕ್ಷಕರು, ಸಿಬ್ಬಂದಿ ಸೇರಿ ಶಾಲೆ ಕಟ್ಟಡವನ್ನು ಸ್ವಚ್ಛಗೊಳಿದ್ದರು.
ತರಗತಿಯ ಒಂದು ಬೆಂಚ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಕೂರಲು ಅವಕಾಶ ನೀಡಲು ಸಿದ್ಧತೆ ನಡೆಸಲಾಗಿದೆ. ಪ್ರತಿ ಶಾಲೆಗಳಲ್ಲಿ ರೋಗ ಲಕ್ಷಣವಿರುವ ಮಕ್ಕಳನ್ನು ಪ್ರತ್ಯೇಕ ಕುಳ್ಳಿರಿಸಲು ಐಸೊಲೇಟೆಡ್ ಕೊಠಡಿ ಪ್ರತ್ಯೇಕ ಇರಿಸಲಾಗಿದೆ. ಬೆಳಗ್ಗೆ 10 ರಿಂದ 1 ಗಂಟೆವರೆಗೆ ತರಗತಿ. ಬುಧವಾರ ಬೆಳಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿ ತಂಡಗಳಾಗಿ ತೆರಳಿ ಶಾಲೆಗಳ ಶಿಕ್ಷಕರು, ಸಿಬ್ಬಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಆರ್‌ಟಿಪಿಸಿಆರ್ ಪರೀಕ್ಷೆಗೆ ಕಳುಹಿಸಿದ್ದಾರೆ. ರಾತ್ರಿ 11 ಗಂಟೆಯೊಳಗೆ ವರದಿ ಸಿಗಲಿದೆ ಎಂದು ಕೋವಿಡ್ ನೋಡಲ್ ಅಧಿಕಾರಿ ಡಾ.ಪ್ರೇಮಾನಂದ್ ತಿಳಿಸಿದ್ದಾರೆ.