

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರಸಕ್ತ ಸಾಲಿನ ಶಾಲಾ ಪ್ರಾರಂಭೋತ್ಸವಕ್ಕೆ ಜಿಲ್ಲಾದ್ಯಂತ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಸಿದ್ದತೆ ಆರಂಭಿಸಿವೆ. ಆದರೆ ಇದುವರೆ ಶೇ.70 ರಷ್ಟು ಮಾತ್ರ ಪಠ್ಯಪುಸ್ತಕ ಸರಬರಾಜಿಗಿದ್ದು, ಸಂಪೂರ್ಣವಾಗಿ ಎಲ್ಲ ಪುಸ್ತಕಗಳು ಮಕ್ಕಳ ಕೈಸೇರಲು ಇನ್ನು ಹದಿನೈದಿಪ್ಪತ್ತು ದಿನ ಕಾಯಬೇಕಾಗಿದೆ ಎನ್ನಲಾಗಿದೆ.
ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಮೇ 29 ಮತ್ತು 30ರಂದು ಶಾಲಾ ಆರಂಭೋತ್ಸಕ್ಕೆ ಸಿದ್ದತೆ ನಡೆದಿದೆ. 31ರಿಂದ ಅಧಿಕೃತವಾಗಿ ತರಗತಿಗಳು ಆರಂಭವಾಗಲಿದೆ ಆದರೆ ಎಲ್ಲ ಭಾಷೆಯ ಪಠ್ಯಪುಸ್ತಕಗಳು ಶಾಲಾ ಆರಂಭದಿಂದಲೇ ವಿದ್ಯಾರ್ಥಿಗಳ ಕೈ ಸೇರುವುದು ಅನುಮಾನವಾಗಿದೆ. ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಈಗಾಗಲೇ ಆಯಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪಠ್ಯುಪುಸ್ತಕಗಳನ್ನು ಪಡೆದು ಸಂಬಂಧಪಟ್ಟ ಶಾಲೆಗಳಿಗೆ ರವಾನಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಮುದ್ರಣಗೊಂಡ ಪುಸ್ತಕಗಳು ಪ್ರತಿ ದಿನ ಸರಬರಾಜಾಗುತ್ತಿದೆ. ಆಯಾ ತಾಲೂಕುಗಳ ಶಾಲೆ ಹಾಗೂ ಮಕ್ಕಳ ದಾಖಲಾತಿ ಆಧಾರದ ಮೇಲೆ ಅವುಗಳನ್ನು ವಿಭಾಗಿಸುವ ಕೆಲಸ ನಡೆಯುತ್ತಿದೆ.
ವಿಳಂಬಕ್ಕೆ ಕಾರಣವೇನು?
ಸಾಮಾನ್ಯವಾಗಿ ಪಠ್ಯಪುಸ್ತಕ ಮುದ್ರಣವನ್ನು ಹಿಂದಿನ ವರ್ಷದ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿಯೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಏಪ್ರಿಲ್ ಹಾಗೂ ಮೇ ವೇಳೆಗೆ ಮುದ್ರಿಸಿ ಆಯಾ ಶಾಲೆಗಳಿಗೆ ಕಳುಹಿಸಲಾಗುತ್ತದೆ. ಈ ವರ್ಷ ಶಿಕ್ಷಣ ಇಲಾಖೆ ಶೈಕ್ಷಣಿಕ ವರ್ಷದ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸದ ಕಾರಣ ಮತ್ತು ಹಿಂದಿನ ಬಿಜೆಪಿ ಸರ್ಕಾರ ಪರಿಷ್ಕರಿಸಿದ ಪಠ್ಯವನ್ನು ಮತ್ತೊಮ್ಮೆ ಪರಿಷ್ಕರಿಸಲು ಮುಂದಾದ ಕಾರಣ ಸಮಸ್ಯೆಯಾಗಿ ಮುದ್ರಣ ಮಾರ್ಚ್‌ನಲ್ಲಿ ಶುರುವಾಗಿದೆ. ಮುದ್ರಣ ಮತ್ತು ಸರಬರಾಜು ಕಾರ್ಯವನ್ನು ಜೂ.4ರಂದು ಪ್ರಕಟವಾಗುವ ಲೋಕಸಭಾ ಚುನಾವಣೆ ಲಿತಾಂಶದ ವೇಳೆಗೆ ಪೂರ್ಣಗೊಳಿಸಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆ ಆರಂಭದಲ್ಲೇ ಮಕ್ಕಳಿಗೆ ಎಲ್ಲ ಪಠ್ಯಗಳು ಕೈಸೇರುವುದು ಅನುಮಾನ ಎನ್ನಲಾಗಿದೆ.
ಖಾಸಗಿ ಶಾಲೆಗಳು ಲೇಟ್: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕನಿಷ್ಟ ಹತ್ತಿಪ್ಪತ್ತು ದಿನಗಳಲ್ಲಿ ಎಲ್ಲ ಭಾಷೆಯ ಪಠ್ಯಪುಸ್ತಕಗಳು ಸಿಗಲಿವೆ ಆದರೆ ಖಾಸಗಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಇನ್ನೂ ತಡವಾಗಲಿದೆ ಎನ್ನಲಾಗಿದೆ. ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ತಮ್ಮ ಶಾಲೆಗಳಿಗೆ ಅವಶ್ಯವಿರುವ ಪುಸ್ತಕಗಳನ್ನು ಖರೀದಿಸಲು ಈಗಾಗಲೇ ಇಂಡೆಂಟ್ ನೀಡಬೇಕಿದೆ. ಬಹುತೇಕ ಶಾಲೆಗಳು ಶೇ.10 ಮುಂಗಡ ಪಾವತಿಸಿ ಇಂಡೆಂಟ್ ನೀಡಿವೆ ಆದರೆ ಹಲವು ಶಾಲೆಗಳು ಇನ್ನೂ ಇಂಡೆಂಟ್ ನೀಡಿಲ್ಲ ಎನ್ನಲಾಗಿದ್ದು, ಇಂಥ ಶಾಲೆ ವಿದ್ಯಾರ್ಥಿಗಳಿಗೆ ತಕ್ಷಣಕ್ಕೆ ಪುಸ್ತಕಗಳು ಸಿಗುವುದಿಲ್ಲ ಎಂಬಂತ ಪರಿಸ್ಥಿತಿ ಇದೆ. ಮುಂಗಡ ಹಣದ ಬಳಿಕ ಶೇ.100 ಹಣ ಪಾವತಿಸಿದರೆ ತಕ್ಷಣ ಪಠ್ಯಪುಸ್ತಕ ಪೂರೈಸಲು ಇಲಾಖೆ ಸಿದ್ದವಿದೆ ಎಂದು ಗ್ರಾಮಾಂತರ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ ಅನೇಕ ಖಾಸಗಿ ಶಾಲೆಗಳಲ್ಲಿ ಈಗಾಗಲೇ ಶೇ.90 ಭಾಗ ದಾಖಲಾತಿ ಪ್ರಕ್ರಿಯೆ ಮುಗಿದಿದೆ. ಶಾಲಾ ಶುಲ್ಕದೊಂದಿಗೆ ಪಠ್ಯಪುಸ್ತಕಗಳ ಶುಲ್ಕವನ್ನು ಕಟ್ಟಿಸಿಕೊಳ್ಳಲಾಗಿದೆ. ಆದರೆ ತರಗತಿ ಆರಂಭವಾದರೂ ಪುಸ್ತಕಗಳು ದೊರೆಯದಿದ್ದರೆ ಹೇಗೆ ಎಂದು ಹಲವು ಪಾಲಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಿರುವುದರಿಂದ ಹಳೆಯ ಪುಸ್ತಕಗಳನ್ನಿಟ್ಟುಕೊಂಡು ಪಾಠ ಹೇಳುವುದೂ ಸಾಧ್ಯವಿಲ್ಲ ಎಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರದ ವಿಳಂಬ ನೀತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಶಾಲಾ ಆರಂಭದಲ್ಲೇ ಸಂಪೂರ್ಣವಾಗಿ ಪಠ್ಯಪುಸ್ತಕ ವಿದ್ಯಾರ್ಥಿಗಳ ಕೈಸೇರಲ್ಲ ಎಂಬ ಮಾತು ಕೇಳಿಬರುತ್ತಿದೆ.
ಈಗಾಗಲೇ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿನ ಎಲ್ಲ ಶಾಲೆಗಳಿಗೆ ಪಠ್ಯಪುಸ್ತಕ ಪೂರೈಸಲು ಇಲಾಖೆ ಸಿದ್ದತೆ ಮಾಡಿಕೊಂಡಿದೆ. ಆಯಾ ತಾಲೂಕುಗಳ ಕ್ಷೇತ್ರಶಿಕ್ಷಣಾಧಿಕಾಗಳ ನೇತೃತ್ವದಲ್ಲಿ ಪ್ರಕ್ರಿಯೆ ನಡೆಯಲಿದೆ. ಶೇ.70 ಪುಸ್ತಕಗಳು ಪೂರೈಕೆಯಾಗಿವೆ ಶಾಲಾ ಆರಂಭದ ದಿನಗಳಲ್ಲಿ ಉಳಿದ ಪುಸ್ತಕಗಳು ಲಭ್ಯವಾಗಲಿದೆ. ಖಾಸಗಿ ಶಾಲೆಗಳು ಎಷ್ಟು ಇಂಡೆಂಟ್ ನೀಡಿವೆ ಎಂಬುದರ ಆಧಾರದ ಮೇಲೆ ಅಂಥ ಶಾಲೆಗಳಿಗೆ ಪುಸ್ತಕ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.
ಕೃಷ್ಣಮೂರ್ತಿ, ಉಪನಿರ್ದೇಶಕ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂ.ಗ್ರಾಮಾಂತರ