ಶಾಲೆಯಲ್ಲಿ ಹಬ್ಬದ ವಾತಾವರಣ

school open
Published on

ಹೂವು, ಸಿಹಿ ವಿತರಿಸಿ ವಿದ್ಯಾರ್ಥಿಗಳ ಸ್ವಾಗತ


ವಿಜಯವಾಣಿ ಸುದ್ದಿಜಾಲ ನೆಲಮಂಗಲ
ತಾಲೂಕಿನಾದ್ಯಂತ ಪ್ರಾಥಮಿಕ ಹಾಗೂ ಪ್ರೌಢಶಾಲೆ ಪುನಾರಂಭಕೊಂಡ ಹಿನ್ನೆಲೆಯಲ್ಲಿ ತಳಿರು ತೋರಣಗಳಿಂದ ಸಿಂಗರಿಸಿ ವಿದ್ಯಾರ್ಥಿಗಳನ್ನು ಶಿಕ್ಷಕರು ಬರಮಾಡಿಕೊಂಡರು.
ಶಾಲೆಯ ತರಗತಿಯ ಕೊಠಡಿಗಳು, ನೀರಿನ ಸಂಪ್, ತೊಟ್ಟಿ, ಅಡುಗೆ ಪಾತ್ರೆಗಳು, ಆಹಾರ ಧಾನ್ಯ ಹಾಗೂ ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ಅನಗತ್ಯ ವಸ್ತುಗಳನ್ನು ವಿಲೇವಾರಿ ಮಾಡಿ, ಶಾಲೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸಲಾಗಿತ್ತು.
ತಾಲೂಕಿನ ಬೂದಿಹಾಲ್ ಗ್ರಾಪಂನ ಮಂಡಿಗೆರೆ ಸರ್ಕಾರ ಪ್ರೌಢಶಾಲೆಗೆ ಭೇಟಿ ನೀಡಿದ್ದ ಕ್ಷೇತ್ರಶಿಕ್ಷಣಾಧಿಕಾರಿ ಎಂ.ಎಚ್.ತಿಮ್ಮಯ್ಯ, ಶಾಲೆ ಬಂದ ವಿದ್ಯಾರ್ಥಿಗಳಿಗೆ ಹೂವು ಹಾಗೂ ಸಿಹಿ ನೀಡುವ ಮೂಲಕ ಸ್ವಾಗತಿಸಿದರು.
ತಾಲೂಕಿನಾದ್ಯಂತ 357 ಶಾಲೆಗಳಿದ್ದು, ಸುಮಾರು 35,047 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಮೇ 29ರಂದು ಶಾಲೆ ಆರಂಭ ಮಾಡುವಂತೆ ಶಿಕ್ಷಣ ಇಲಾಖೆ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಎಲ್ಲ ಶಾಲೆ ಮುಖ್ಯಶಿಕ್ಷಕರನ್ನು ಸಭೆ ಕರೆದು ನಿರ್ದೇಶನ ನೀಡಲಾಗಿದೆ. ಈ ಬಾರಿ ಮಕ್ಕಳಿಗೆ ಮೊದಲೇ ದಿನವೇ ಪಠ್ಯ ಪುಸ್ತಕ ಮತ್ತು ಸಮವಸ ನೀಡಲಾಗುತ್ತಿದೆ. ಶಾಲೆಗೆ ವಿದ್ಯಾರ್ಥಿಗಳು ಸಂತಸದಿಂದ ಬರಮಾಡಿಕೊಳ್ಳಲು ಶಾಲಾ ಮುಖ್ಯ ಶಿಕ್ಷಕರಿಗೆ ತಿಳಿಸಲಾಗಿದೆ. ಎಲ್ಲ ಶಾಲೆಯಲ್ಲೂ ಬಿಸಿಯೂಟದ ವ್ಯವಸ್ಥೆ ಮಾಡಲಾಗಿದೆ. ತಾಲೂಕಿನಾದ್ಯಂತ ಸಾಕಷ್ಟು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ ಎಂದು ಬಿಇಒ ಎಂ.ಎಚ್.ತಿಮ್ಮಯ್ಯ ತಿಳಿಸಿದರು.

35,047 ಮಂದಿ ದಾಖಲಾತಿ: ತಾಲೂಕಿನಾದ್ಯಂತ 181 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, 99 ಹಿರಿಯ ಪ್ರಾಥಮಿಕ ಶಾಲೆ ಮತ್ತು 11 ಪ್ರೌಢಶಾಲೆಗಳ ಪೈಕಿ 16, 337 ಮಂದಿ ವಿದ್ಯಾರ್ಥಿಗಳಿದ್ದಾರೆ. ಹಾಗೆಯೇ 2 ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, 19 ಪ್ರೌಢಶಾಲೆ ಸೇರಿ 21 ಶಾಲೆಗಳಲ್ಲಿ 3,292 ವಿದ್ಯಾರ್ಥಿಗಳಿದ್ದಾರೆ. 42 ಖಾಸಗಿ ಶಾಲೆಯಲ್ಲಿ 14,898 ಮಂದಿ ವಿದ್ಯಾರ್ಥಿಗಳು, ಸಮಾಜ ಕಲ್ಯಾಣ ಇಲಾಖೆಯ 3 ಶಾಲೆಗಳಲ್ಲಿ 517 ಮಂದಿ ವಿದ್ಯಾರ್ಥಿಗಳಿದ್ದಾರೆ. ಒಟ್ಟಾರೆ ತಾಲೂಕಿನಾದ್ಯಂತ 357 ಶಾಲೆಗಳಿದ್ದು, ಸುಮಾರು 35,047 ಮಂದಿ ವಿದ್ಯಾರ್ಥಿಗಳು 2023-24ನೇ ಸಾಲಿಗೆ ದಾಖಲಾಗಿದ್ದಾರೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎಂ.ಎಚ್.ತಿಮ್ಮಯ್ಯ ಮಾಹಿತಿ ನೀಡಿದರು.
ಶಿಕ್ಷಕರಾದ ವೈ.ಟಿ.ಬೈಲಪ್ಪ, ಶಿವಕುಮಾರ್,ಕೆಂಪರಾಜು, ರುದ್ರಮೂರ್ತಿ, ಲಿಂಗದೇವರು, ಧನಲಕ್ಷ್ಮೀ, ಸಾಹಿನಾ ಅಲ್ಲಾಪುರ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಸಿ.ಗಂಗಾಧರಯ್ಯ, ಸದಸ್ಯರಾದ ಮಂಜಪ್ಪ, ರಾಮಯ್ಯ, ಶಶಿಧರ್‌ಗೌಡ, ಮಂಜುನಾಥ್‌ಗೌಡ, ಚಿಕ್ಕಣ್ಣ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net