ಶಾಲಾ ಸಂಸತ್ ಚುನಾವಣೆ

School Parliament Election
Published on

ನಾಪೋಕ್ಲು:

ಭವ್ಯ ಭಾರತದ ಮುಂದಿನ ಭವಿಷ್ಯದ ಪ್ರಜೆಗಳಾದ ಮಕ್ಕಳಿಗೆ ಪ್ರಜಾಪ್ರಭುತ್ವದ ಮಹತ್ವದೊಂದಿಗೆ, ಆಡಳಿತ ವ್ಯವಸ್ಥೆಯ ಅರಿವು ಮೂಡಿಸುವ ಉದ್ದೇಶದಿಂದ ಸಮೀಪದ ಕೊಣಂಜAಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾರಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಚುನಾವಣೆ ಮೂಲಕ ಶಾಲಾ ಸಂಸತ್ತು ಸ್ಥಾಪಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯ ವೇದಪ್ರಸಾದ್ ನಿರ್ದೇಶನದಂತೆ ನಡೆದ ಚುನಾವಣೆಯಲ್ಲಿ ಪ್ರಧಾನ ಮಂತ್ರಿಯಾಗಿ ಜೆ.ಸಿ ಮನು, ಉಪ ಪ್ರಧಾನಿಯಾಗಿ ಹೆಚ್.ಪಿ. ಪೊನ್ನಪ್ಪ, ಗೃಹ ಮಂತ್ರಿಗಳಾಗಿ ಪ್ರೀತಂ ಮತ್ತು ತಶ್ವಿನ್ , ಆರೋಗ್ಯ ಮಂತ್ರಿಗಳಾಗಿ ರಚನ ಮತ್ತು ನವ್ಯ ಕ್ರೀಡಾ ಮಂತ್ರಿಯಾಗಿ ಪೊನ್ನಪ್ಪ, ಸಾಂಸ್ಕೃತಿಕ ಸಚಿವರಾಗಿ ತಾನ್ಸಿ ಮತ್ತು ಸಿಂಧು, ಸ್ವಚ್ಚತಾ ಸಚಿವರಾಗಿ ನೇಹಾಲ್ ಮತ್ತು ಶಶಾಂಕ್, ತೋಟಗಾರಿಕೆ ಮಂತ್ರಿಗಳಾಗಿ ಡೆವಿನ್ ಕರುಂಬಯ್ಯ ಮತ್ತು ಹೇಮಂತ್, ವಾರ್ತಾ ಮಂತ್ರಿಯಾಗಿ ನಂದಿನಿ, ಆಹಾರ ಮಂತ್ರಿಗಳಾಗಿ ಸಿಂಧು ಮತ್ತು ಪೂಜ ಆಯ್ಕೆಯಾದರು.

ಆಯ್ಕೆ ಪ್ರಕ್ರಿಯೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಗುಪ್ತ ಮತದಾನದ ಮೂಲಕ ನಡೆಯಿತು. ನಂತರ ಮಾತನಾಡಿದ ಮುಖ್ಯ ಶಿಕ್ಷಕ ವೇದ ಪ್ರಸಾದ್, ಮಕ್ಕಳ ಮನಸ್ಸಿನಲ್ಲಿ ಪ್ರಜಾಪ್ರಭುತ್ವದ ಮಹತ್ವ ಮತ್ತು ದೇಶ ಕಟ್ಟುವಲ್ಲಿನ ಜವಾಬ್ದಾರಿಯ ಅರಿವನ್ನು ಈಗಿನಿಂದಲೇ ಜಾಗೃತಿಗೊಳಿಸಿದರೆ, ಮುಂದಿನ ಭವ್ಯ ಬಲಿಷ್ಠ ದೇಶದ ಕನಸು ನನಸಾಗಲಿದೆ. ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೆ ನಾಯಕತ್ವದೊಂದಿಗೆ ಸೇವಾ ಮನೋಭಾವ ರೂಢಿಸಿಕೊಳ್ಳಲು ಸಹಕಾರಿ ಆಗುತ್ತದೆ. ಆ ನಿಟ್ಟಿನಲ್ಲಿ ನಡೆದ ವಿದ್ಯಾರ್ಥಿ ಸಂಸತ್ ಚುನಾವಣೆ ಸಮಾಜಕ್ಕೆ ಮಾದರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಸಹಶಿಕ್ಷಕ ಕಿಶೋರ್ ಕುಮಾರ್ ಸೇರಿದಂತೆ ಶಿಕ್ಷಕವೃಂದ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net