

ಹುಬ್ಬಳ್ಳಿ: ಇಲ್ಲಿಯ ಘಂಟಿಕೇರಿಯ ನೇತಾಜಿ ಸುಭಾಸಚಂದ್ರ ಬೋಸ್ ಆವಾಸೀಯ ಶಾಲೆ, ಶಾಸಕರ ಮಾದರಿ ಗಂಡು ಮಕ್ಕಳ ಸರ್ಕಾರಿ ಪ್ರಾಥಮಿಕ ಶಾಲೆ ನಂ.5, ಮಾದರಿ ಹೆಣ್ಣು ಮಕ್ಕಳ ಸರ್ಕಾರಿ ಪ್ರಾಥಮಿಕ ಶಾಲೆ ನಂ.1 ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ್ರ, ಪ್ರಸಕ್ತ ವರ್ಷವನ್ನು "ಶೈಕ್ಷಣಿಕ ಬಲವರ್ಧನಾ ವರ್ಷ' ಎಂದು ಇಲಾಖೆ ಘೋಷಿಸಿದೆ. ಇದರನ್ವಯ ತಾಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ಕಲಿಕಾ ಗುಣಮಟ್ಟ ಹೆಚ್ಚಿಸುವ ಭಾಷಾ ಸಪ್ತಾಹ ಮತ್ತು ಗಣಿತ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಮಾಸಿಕವಾರು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದರು.
ಅತಿಥಿಗಳಾಗಿದ್ದ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್. ಶಿವಳ್ಳಿಮಠ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಕಲಿಕಾ ಗುಣಮಟ್ಟ ಉಳಿಸಿಕೊಳ್ಳುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸಲು ಸಾಧ್ಯ ಎಂದರು.
ಇಲಾಖೆಯು ಇದಕ್ಕಾಗಿ ಉಚಿತ ದಾಖಲಾತಿ, 8ರಿಂದ 10ನೇ ತರಗತಿಗೆ ಕನಿಷ್ಠ ಶುಲ್ಕ, ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಚಟುವಟಿಕೆ ಆಧಾರಿತ ಕಲಿಕೆ, ಬಿಸಿಯೂಟ, ರ ಯೋಜನೆ, ಪಿಎಂಶ್ರೀ ಯೋಜನೆಯನ್ವಯ ಸುಸಜ್ಜಿತ ಶಾಲಾ ಉಪಕರಣಗಳು ಹಲವು ಯೋಜನೆ ಜಾರಿ ಮಾಡಿದೆ. ಇದರ ಸದುಪಯೋಗ ಪಡೆಯುವ ಮೂಲಕ ಪಾಲಕರು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಹಾಜರಾಗುವಂತೆ ಕ್ರಮವಹಿಸಬೇಕೆಂದರು.
ಡಯಟ್ ಉಪನ್ಯಾಸಕರಾದ ಮಂಜುಳಾ ಅಂಬಿಗೇರ, ಸಾವಿತ್ರಿ ಕೋಳಿ ಅವರು ಮಾತನಾಡಿದರು.
ಮಕ್ಕಳಿಗೆ ಉಚಿತ ಸಮವಸ್ತ್ರ , ಪಠ್ಯಪುಸ್ತಕ ವಿತರಣೆ ಮಾಡಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹುಬ್ಬಳ್ಳಿ ಶಹರ ಟಕ ಅಧ್ಯಕ್ಷ ಎಂ.ಎಚ್. ಜಂಗಳಿ, ಸಿಆರ್ಪಿ, ಮುಖ್ಯಶಿಕರು, ವಿದ್ಯಾಥಿರ್ಗಳು ಮತ್ತು ಪಾಲಕರು ಹಾಜರಿದ್ದರು. ಬುಡೆನ್ಖಾನ್ ನಿರೂಪಿಸಿದರು. ನಿಂಗಪ್ಪ ಪಶುಪತಿಹಾಳ ವಂದಿಸಿದರು.