ಚುನಾವಣೆಗಾಗಿ ತೆರೆಯುವ ಶಾಲೆ

Sankalakariya school
ಸಂಕಲಕರಿಯ ಅನುದಾನಿತ ಕನ್ನಡ ಮಾಧ್ಯಮ ಶಾಲೆ.
Published on

ಸಂಕಲಕರಿಯ ಅನುದಾನಿತ ಕನ್ನಡ ಮಾಧ್ಯಮ ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ 2017ರಲ್ಲಿ ಮುಚ್ಚಲಾಗಿದ್ದು, ವಿಧಾನಸಭಾ ಚುನಾವಣೆ ನಿಮಿತ್ತ ಮತ್ತೆ ತೆರೆದಿದೆ. ಈ ಕುರಿತ ವಿಶೇಷ ವರದಿ ಇಲ್ಲಿದೆ. - ಹರಿಪ್ರಸಾದ್ ನಂದಳಿಕೆ ,ಕಾರ್ಕಳ

ವಿದ್ಯಾರ್ಥಿಗಳ ಕೊರತೆಯಿಂದ ಹಾಕಿ 2017ರಲ್ಲಿ ಮುಚ್ಚಲಾಗಿದ್ದ ಮೂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕಲಕರಿಯ ಅನುದಾನಿತ ಕನ್ನಡ ಮಾಧ್ಯಮ ಶಾಲೆ ಬಾಗಿಲು ಮತ್ತೆ ತೆರೆಯುವ ಯೋಗ ಬಂದಿದೆ.

2017ರಲ್ಲಿ ಮಕ್ಕಳ ಕೊರತೆಯಿಂದ ಮುಚ್ಚಿ ಸಂಪೂರ್ಣ ನೇಪಥ್ಯಕ್ಕೆ ಸರಿದ ಶಾಲೆಯ ಬಾಗಿಲು ಮತ್ತೆ ತೆರೆದುಕೊಂಡಿದ್ದು, ವಿದ್ಯಾರ್ಜನೆಗಾಗಿ ಆಲ್ಲ. ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯ ಮತದಾನಕ್ಕಾಗಿ.

ಸ್ವಾತಂತ್ರೃ ಪೂರ್ವದಲ್ಲಿ ಪ್ರಾರಂಭಗೊಂಡಿದ್ದ ಈ ಶಾಲೆ ಶತಮಾನೋತ್ತರ ಇತಿಹಾಸ ಹೊಂದಿದೆ. ಮುಂಡ್ಕೂರು ದೊಡ್ಡಮನೆ ದಿ.ವೆಂಕಣ್ಣ ಶೆಟ್ಟರ ಆಡಳಿತದಲ್ಲಿ ನಡೆಯುತ್ತಿತ್ತು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದಂತೆ ಸರ್ಕಾರ ಅನುದಾನಿತ ಶಾಲೆಗಳಿಗೆ ಶಿಕ್ಷಕರನ್ನು ನೀಡುವುದನ್ನು ನಿಲ್ಲಿಸಿದ ಕಾರಣ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಕೊನೆಯ ಶಿಕ್ಷಕ ಬಾಬು ಶೆಟ್ಟಿಯವರ ನಿವೃತ್ತಿಯ ನಂತರ ಮಕ್ಕಳೂ ಇಲ್ಲದೆ ಶಿಕ್ಷಕರೂ ಇಲ್ಲದ ಈ ಕಟ್ಟಡಕ್ಕೆ ಇಲಾಖೆಯೇ ಬೀಗ ಜಡಿದಿತ್ತು.

ಕನ್ನಡ ಮಾಧ್ಯಮ ಶಾಲೆ

ಮಕ್ಕಳ ಹಾಗೂ ಶಿಕ್ಷಕರ ಕೊರತೆಯಿಂದ ಕನ್ನಡ ಮಾಧ್ಯಮ ಶಾಲೆ ಮುಚ್ಚಿತ್ತು. ಈಗ ಮಚ್ಚಿದ ಶಾಲೆಯ ಬಾಗಿಲು ತೆರೆಯುವುದು ಪ್ರತಿ ಚುನಾವಣಾ ಸಂದರ್ಭದಲ್ಲಿ ಮಾತ್ರ. ಈ ಶಾಲೆಯಲ್ಲಿ ಏಳನೇ ತರಗತಿಯವರೆಗೆ ವ್ಯಾಸಂಗ ಮಾಡಿ ಬಳಿಕ ಉನ್ನತ ವ್ಯಾಸಂಗ ಮಾಡಿದ ಅದೆಷ್ಟೋ ಮಂದಿ ದೇಶ ವಿದೇಶಗಳಲ್ಲಿ ಉನ್ನತ ಉದ್ಯೋಗದಲ್ಲಿದ್ದಾರೆ. ಅಮೆರಿಕ, ಲಂಡನ್‌ಗಳಲ್ಲಿ ವೈದ್ಯರು, ಇಂಜಿನಿಯರ್, ವಿಜ್ಞಾನಿಗಳೂ ಇದ್ದಾರೆ. ಶಿಕ್ಷಕರು, ಉದ್ಯಮಿಗಳು, ರಂಗನಟರು, ಸಿನೆಮಾ ನಟರೂ ಇದ್ದಾರೆ. ಕೃಷಿಕರು, ರಾಜಕಾರಣಿಗಳೂ ಇದ್ದಾರೆ. ಒಟ್ಟರೆಯಾಗಿ ಸಾವಿರಾರು ಮಂದಿಗೆ ಉನ್ನತ ಭವಿಷ್ಯ ಬರೆದ ಈ ಶಾಲೆ ಇದೀಗ ಚುನಾವಣೆಗಳಿಗೆ ಮಾತ್ರ ತೆರೆಯುತ್ತಿದೆ. 2018ರ ವಿಧಾನಸಭೆ ಚುನಾವಣೆ, ಬಳಿಕ ನಡೆದ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಈ ಶಾಲೆಯ ಬಾಗಿಲು ತೆರೆಯಲಾಗಿತ್ತು. ಇದೀಗ ಮತ್ತೆ ವಿಧಾನಸಭಾ ಚುನಾವಣೆಗಾಗಿ ಬಾಗಿಲು ತೆರೆಯುವ ಯೋಗ ಕೂಡಿ ಬಂದಿದೆ.

122ನೇ ವಿಧಾನಸಭಾ ಕ್ಷೇತ್ರದ ಬೂತ್

ಕಾರ್ಕಳ ವಿದಾನಸಭಾ ಕ್ಷೇತ್ರದ 122ನೇ ಬೂತ್ ಇದಾಗಿದ್ದು, ಮುಂಡ್ಕೂರು ಗ್ರಾಮ ಪಂಚಾಯಿತಿ ವಾರ್ಡ್ ಸಂಖ್ಯೆ 1ರ ಮತದಾರರಿಗೆ ಚುನಾವಣೆ ಇಲ್ಲಿ ನಡೆಯುತ್ತಿದ್ದು 1 ಸಾವಿರಕ್ಕೂ ಮಿಕ್ಕಿ ಮತದಾರರಿದ್ದಾರೆ. ಮೇ 10ರಂದು ಇವರೆಲ್ಲಾ ಒಂದು ದಿನ ತೆರೆಯಲಿರುವ ಈ ಶಾಲೆಯಲ್ಲಿ ತಮ್ಮ ಮತದಾದ ಹಕ್ಕು ಚಲಾಯಿಸಲಿದ್ದಾರೆ. ಪ್ರತಿ ಚುನಾವಣೆಯ ಸಂದರ್ಭ ಮುಂಡ್ಕೂರು ಪಿಡಿಒ, ನೌಕರರು, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು ಈ ಶಾಲೆಯನ್ನು ಶುಚಿಗೊಳಿಸಿ ಚುನಾವಣೆಗೆ ಅಣಿಗೊಳಿಸುತ್ತಾರೆ.

ಮಕ್ಕಳ ಕೊರತೆಯಿಂದ ಕನ್ನಡ ಮಾಧ್ಯಮ ಶಾಲೆ ಮುಚ್ಚಲಾಗಿತ್ತು. ಆದರೆ ಪ್ರತಿ ಚುನಾವಣೆ ವೇಳೆಯಲ್ಲಿ ಮುಚ್ಚಿದ ಶಾಲೆಗೆ ಬಾಗಿಲು ತೆರೆಯುವ ಭಾಗ್ಯ ಬರುತ್ತದೆ. -ಸುರೇಶ್, ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net