ಮರಳಿ ಶಾಲೆಗಳತ್ತ ಮಕ್ಕಳು: ಇಂದಿನಿಂದ ತರಗತಿ ಪುನಾರಂಭ

1 (4)
Published on

ಮಂಡ್ಯ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಅದರಂತೆ ಜಿಲ್ಲೆಯಲ್ಲಿ ಮೇ.31ರಿಂದ ತರಗತಿಗಳು ಪುನಾರಂಭವಾಗಲಿದ್ದು, ರಜೆಯ ಮಜ ಅನುಭವಿಸಿರುವ ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಶಿಕ್ಷಣ ಇಲಾಖೆ ಸಜ್ಜಾಗಿದೆ.

ಶಿಕ್ಷಕರು ಮತ್ತು ಸಿಬ್ಬಂದಿ ಮೇ.29ರಂದೇ ಶಾಲೆಗೆ ಆಗಮಿಸಿ ಸ್ವಚ್ಛತೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಸ್ವಾಗತಿಸುವುದರ ಜತೆಗೆ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಆಚರಿಸಲು ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಲೆಗಳನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗುತ್ತಿದೆ. ತರಗತಿಗಳು ಸಮರ್ಪಕವಾಗಿ ನಡೆಯಲು ಶಾಲಾ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಲಾಗಿದೆ. ಅಗತ್ಯ ದಾಖಲೆಗಳನ್ನು ನಿರ್ವಹಣೆ ಜತೆಗೆ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವುದು ಮುಖ್ಯ ಶಿಕ್ಷಕರ ಜವಾಬ್ದಾರಿ ಎಂದು ಸೂಚನೆ ನೀಡಲಾಗಿದೆ. ಶಾಲೆಗಳನ್ನು ಆಕರ್ಷಣೀಯಗೊಳಿಸಿ, ಗ್ರಂಥಾಲಯ, ಗಣಕಯಂತ್ರ, ಪ್ರಯೋಗಾಲಯ ಎಲ್ಲವೂ ಸುಸಜ್ಜಿತವಾಗಿರಬೇಕು ಎಂದು ಈಗಾಗಲೇ ಡಿಡಿಪಿಐ ಎಲ್ಲ ಶಾಲೆಗಳ ಮುಖ್ಯಸ್ಥರಿಗೂ ಆದೇಶ ನೀಡಿದ್ದಾರೆ.

ಇದರೊಟ್ಟಿಗೆ ವಿವಿಧ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸುವುದರ ಜತೆಗೆ ಆ ಮನೆಗೆ ಶಿಕ್ಷಕರು, ಮುಖ್ಯ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸಹಯೋಗದೊಂದಿಗೆ ಭೇಟಿ ನೀಡಿ ಪಾಲಕರ ಮನವೊಲಿಸಿ ಮತ್ತೆ ಶಾಲೆಗೆ ದಾಖಲಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜಾಥಾ, ಘೋಷಣೆ ಮತ್ತು ಭಿತ್ತಿ ಪತ್ರ/ ಕರಪತ್ರಗಳನ್ನು ಹಂಚುವ ಮೂಲಕ ಶಾಲಾ ಶಿಕ್ಷಣದ ಪ್ರಾಮುಖ್ಯತೆ ತಿಳಿಸಲಾಗುತ್ತಿದೆ. ಮಂಗಳವಾರ ಸೇತುಬಂಧ ಶಿಕ್ಷಣ(ಪುಸ್ತಕ ಪರಿಚಯ ಅವಧಿಗಳ ನಿರ್ವಹಣೆ ಕುರಿತ ಸಿದ್ಧತೆ) ಪೂರ್ವಭಾವಿ ಸಭೆಗಳು, ವಿವಿಧ ಹಂತದ ತರಬೇತಿ ಮತ್ತು ಸಮಾಲೋಚನಾ ಸಭೆಗಳಲ್ಲಿನ ಕೈಗೊಂಡ ನಿರ್ಣಯಗಳ ಅಂಗೀಕಾರ, ಅನುಷ್ಠಾನ ಪ್ರಕ್ರಿಯೆ ನಡೆದಿದೆ.

ಪುಸ್ತಕ, ಸಮವಸ್ತ್ರ ಪೂರೈಕೆ: ಜಿಲ್ಲೆಗೆ ಶೇ.100ರಷ್ಟು ಪುಸ್ತಕಗಳು, ಸಮವಸ್ತ್ರಗಳು ಈಗಾಗಲೇ ಪೂರೈಕೆಯಾಗಿದೆ. ಎಲ್ಲ ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ಅಗತ್ಯವಾದ 14,09,074 ಪುಸ್ತಕಗಳು ಬಂದಿದ್ದು, ಅವುಗಳನ್ನು ಶಾಲೆಗಳಿಗೆ ರವಾನೆ ಮಾಡಲಾಗಿದೆ. ಅದೇ ರೀತಿ ಸರ್ಕಾರಿ ಶಾಲೆಗಳ 93,451 ಮಕ್ಕಳಿಗೆ ಸಮವಸ್ತ್ರವೂ ಬಂದಿದೆ. ಅವುಗಳು ಈಗಾಗಲೇ ಶಾಲೆಗಳನ್ನು ತಲುಪಿವೆ. ಶಾಲಾ ಪ್ರಾರಂಭೋತ್ಸವದಲ್ಲೆ ಮಕ್ಕಳಿಗೆ ವಿತರಿಸಲಾಗುತ್ತಿದೆ.

ಏಳು ಶಾಲೆ ಪುನಾರಂಭ: ಮಕ್ಕಳ ದಾಖಲಾತಿ ಇಲ್ಲದ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿದ್ದ ಜಿಲ್ಲೆಯ ಏಳು ಶಾಲೆಗಳು ಮತ್ತೆ ಪುನಾರಂಭಗೊಳ್ಳುತ್ತಿವೆ. ಕೆ.ಆರ್.ಪೇಟೆ ತಾಲೂಕಿನ ಚಾವುಡಘಟ್ಟ, ದೊಡ್ಡಗಾಡಿನಹಳ್ಳಿ, ಮಂಡ್ಯ ದಕ್ಷಿಣ ವಲಯದ ಚನ್ನಪ್ಪನದೊಡ್ಡಿ, ಹೊಸನಗರ ಉರ್ದು ಶಾಲೆ, ಮಳವಳ್ಳಿ ತಾಲೂಕು ಬಾಚಹಳ್ಳಿ ಮತ್ತು ನಾಗಮಂಗಲ ತಾಲೂಕಿನ ಕುಡುಗುಬಾಳು, ಹಂದನಹಳ್ಳಿ ಗ್ರಾಮದ ಶಾಲೆಗಳ ಬಾಗಿಲು ಮತ್ತೆ ತೆರೆಯುತ್ತಿವೆ.

ಇನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿ ಜಿಲ್ಲೆಯಲ್ಲಿ ಒಟ್ಟಾರೆ 1781 ಶಾಲೆಗಳಿವೆ. ಶಿಥಿಲಗೊಂಡಿರುವ ಶಾಲೆಗಳ ಕಟ್ಟಡಗಳ ದುರಸ್ತಿಗೆ ಈಗಾಗಲೇ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಪ್ರಾಥಮಿಕ ಶಾಲೆಗೆ 827 ಹಾಗೂ ಪ್ರೌಢಶಾಲೆಗೆ 219 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net