

ಕುಂದಗೋಳ: ತಾಲೂಕಿನ ಗುಡೇನಕಟ್ಟಿ ಗ್ರಾಮ ಸೇರಿ ವಿವಿಧೆಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ತಾಲೂಕು ಮಟ್ಟದ ಶೈಕ್ಷಣಿಕ ಕಾರ್ಯಾಗಾರದ ನೆಪವೊಡ್ಡಿ ಶಾಲೆಗೆ ಬೀಗ ಹಾಕಿರುವ ಘಟನೆ ಸೋಮವಾರ ನಡೆದಿದೆ.
ಈ ಕುರಿತು ಮಾಹಿತಿ ನೀಡಿದ ಎಸ್ಡಿಎಂಸಿ ಸದಸ್ಯ ಗೋಪಾಲ ದೊಡಮನಿ, ತಾಲೂಕು ಮಟ್ಟದ ಕಾರ್ಯಾಗಾರವಿದೆ ಎಂದು ಶಾಲೆಯ ಎಲ್ಲ ಶಿಕ್ಷಕರು ಒಒಡಿ (ಕಚೇರಿ ಕಾರ್ಯ ನಿಮಿತ್ತ) ಹಾಕಿ ಸೋಮವಾರ ಮಧ್ಯಾಹ್ನ 12.30ಕ್ಕೆ ಮಕ್ಕಳಿಗೆ ಬಿಸಿ ಊಟ ವಿತರಿಸಿ, ಶಾಲೆಗೆ ರಜೆ ನೀಡಿ ಹೋಗಿದ್ದಾರೆ ಎಂದು ಆರೋಪಿಸಿದರು. ಬಿಇಒ ವಿದ್ಯಾ ಕುಂದರಗಿ ಅವರನ್ನು ಮಾತನಾಡಿಸಿದಾಗ ಕಾರ್ಯಾಗಾರಕ್ಕೆ ಬರಲು ತಾಲೂಕಿನ ಎಲ್ಲ ಶಾಲೆಗಳಿಗೆ ಜ್ಞಾಪನಾ ಪತ್ರ ನೀಡಲಾಗಿತ್ತು. ಪತ್ರದಲ್ಲಿ ಸ್ಪಷ್ಟವಾಗಿ ಶಾಲೆಯಲ್ಲಿರುವ ಶೇ. 50 ಶಿಕ್ಷಕರು ಮಾತ್ರ ಹಾಜರಾಗಿ ಇನ್ನುಳಿದ ಶೇ. 50 ಶಿಕ್ಷಕರು ಶಾಲೆಯಲ್ಲಿಯೇ ಇದ್ದು ಮಕ್ಕಳ ವಿದ್ಯಾಭ್ಯಾಸದ ಚಟುವಟಿಕೆಯತ್ತ ಗಮನ ಹರಿಸಬೇಕೆಂದು ನಮೂದಿಸಿದ್ದೇನೆ. ಆದರೆ, ಗುಡೇನಕಟ್ಟಿ ಗ್ರಾಮದ ಶಾಲೆಯವರು ಎಲ್ಲರೂ ಏಕೆ ಬಂದಿದ್ದಾರೆ ಎಂದು ತಿಳಿದಿಲ್ಲ. ಶಾಲೆಯ ಶಿಕ್ಷಕರೆಲ್ಲರಿಗೂ ನೋಟಿಸ್ ನೀಡಿ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.