

ತುರುವೇಕೆರೆ: ತಾಲೂಕಿನ ಬುಗಡನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಿಬ್ಬರು ಮಕ್ಕಳೆದುರೇ ಹೊಡೆದಾಡಿಕೊಂಡಿದ್ದು, ಶಿಕ್ಷಕರ ವರ್ತನೆಯಿಂದ ಅಸಮಾಧಾನಗೊಂಡ ಗ್ರಾಮಸ್ಥರು ಮಕ್ಕಳ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಆರೋಪಿಸಿ ಶನಿವಾರ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ಬಿ.ಸಿ.ನರಸಿಂಹರಾಜು ಮಾತನಾಡಿ, ಶಿಕ್ಷಕರಾದ ಮಲ್ಲಿಕಾರ್ಜುನ ಮತ್ತು ರಾಜು ಶುಕ್ರವಾರ ಸಂಜೆ ಶಾಲೆ ಬಿಡುವ ಮುಂಚೆ ಶಾಲೆ ಆವರಣದಲ್ಲಿ ಮಕ್ಕಳ ಎದುರಿಗೆ ಪರಸ್ಪರ ಕೊರಳ ಪಟ್ಟಿಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ. ಅಲ್ಲದೇ ಶಿಕ್ಷಕ ರಾಜು ಬೆಳಗ್ಗೆ ಶಾಲೆಗೆ ಸರಿಯಾದ ಸಮಯಕ್ಕೆ ಬರುವುದಿಲ್ಲ ಮತ್ತು ಸಂಜೆ ಶಾಲೆ ಬಿಡುವ ಮೊದಲೇ ಹೋಗುತ್ತಾರೆ. ಇದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತದೆ. ವಿದ್ಯಾರ್ಥಿಗಳ ಭವಿಷ್ಯದ ಜತೆ ಶಿಕ್ಷಕರು ಚೆಲ್ಲಾಟವಾಡುತ್ತಿದ್ದಾರೆ. ಇಂತಹ ಶಿಕ್ಷಕರಿಂದ ಗ್ರಾಮದ ಮಕ್ಕಳು ಬೇರೆ ಶಾಲೆಗೆ ಹೋಗುವಂತಾಗಿದ್ದು, ಶಾಲಾ ದಾಖಲಾತಿಯೂ ಕುಸಿಯುತ್ತಿದೆ. ಶಿಕ್ಷಕರ ದುವರ್ತನೆಯಿಂದ ಈ ಶಾಲೆಗೆ ಬರುವ ಬೇರೆ ಶಿಕ್ಷಕರೂ ಕೆಲವೇ ತಿಂಗಳಲ್ಲಿ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. ದುವರ್ತನೆ ತೋರುವ ಹಾಗೂ ತಪ್ಪಿತಸ್ಥ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಬಿಇಒಗೆ ಪತ್ರ ಬರೆಯಲಾಗಿದೆ ಎಂದರು.
ಅನಾರೋಗ್ಯ ಕಾರಣ ಸಿಆರ್ಪಿ ಮಧುಕುಮಾರ್ ಮತ್ತು ಇಸಿಒ ಶಿವಕುಮಾರ್ ಅವರನ್ನು ಬುಗಡನಹಳ್ಳಿಯ ಸರ್ಕಾರಿ ಶಾಲೆಗೆ ಕಳುಹಿಸಲಾಗಿದೆ. ಪರಿಶೀಲನೆ ಬಳಿಕ ತಪ್ಪಿತಸ್ಥ ಶಿಕ್ಷಕರಿಗೆ ನೋಟಿಸ್ ನೀಡಿ, ಕ್ರಮ ಕೈಗೊಳ್ಳಲಾಗುವುದು.
ಎನ್.ಸೋಮಶೇಖರ್ ಕ್ಷೇತ್ರ ಶಿಕ್ಷಣಾಧಿಕಾರಿ