ಪಾಲಕರ ಮನವೊಲಿಕೆ ಕಸರತ್ತು

school
ನೆಲಮಂಗಲ ತಾಲೂಕು ದೇವರಹೊಸಹಳ್ಳಿ ತೋಟದ ಸರ್ಕಾರಿ ಶಾಲೆ
Published on

ದೇವರಹೊಸಹಳ್ಳಿಯ ಶಾಲಾ ಶಿಕ್ಷಕಿ ವರ್ಗಾವಣೆ ಪ್ರಹಸನ

ಹಿರಿಯ ಅಧಿಕಾರಿಗಳಿಗೆ ವರದಿ


ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ದಾಬಸ್‌ಪೇಟೆ
ನೆಲಮಂಗಲ ತಾಲೂಕು ಸೋಂಪುರ ಹೋಬಳಿ ಅಗಳಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಹೊಸಹಳ್ಳಿ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಶಿಕ್ಷಕಿ ವರ್ಗಾವಣೆ ಪ್ರಹಸನಕ್ಕೆ ತಾರ್ಕಿಕ ಅಂತ್ಯ ಕಲ್ಪಿಸುವಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಸಾಕಷ್ಟು ಕಸರತ್ತು ನಡೆಸಿದ್ದಾರೆ.
ಪ್ರಸ್ತುತ ವರ್ಗಾವಣೆಯಾಗಿರುವ ಶಿಕ್ಷಕಿಯನ್ನು ಮತ್ತೆ ಇದೇ ಶಾಲೆಗೆ ವರ್ಗ ಮಾಡುವುದು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿರುವ ಅಧಿಕಾರಿಗಳು ತಾತ್ಕಾಲಿಕವಾಗಿ ಮತ್ತೊರ್ವ ಶಿಕ್ಷಕರನ್ನು ನಿಯೋಜಿಸಿ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಕ್ರಮಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಏನಿದು ಪ್ರಕರಣ?
ದೇವರಹೊಸಹಳ್ಳಿ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿ ಲಕ್ಷ್ಮಿದೇವಮ್ಮ ಬೇರೆಡೆ ವರ್ಗಾವಣೆಯಾಗಿದ್ದರು. ವಿರುಪಾಕ್ಷಯ್ಯ ಹಾಗೂ ಶಶಿಕಲಾ ಎಂಬ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದರು ಈ ನಡುವೆ ಶಶಿಕಲಾ ಎಂಬುವರ ವಿರುದ್ಧ ಪಾಲಕರು ಆಕ್ಷೇಪ ವ್ಯಕ್ತಪಡಿಸಿ ಮರಳಿ ಲಕ್ಷ್ಮೀದೇವಮ್ಮ ಅವರನ್ನೇ ಈ ಶಾಲೆಗೆ ನಿಯೋಜಿಸಬೇಕು ಎಂದು ಪಟ್ಟು ಹಿಡಿದಿದ್ದರು. ಅಲ್ಲದೆ ಈ ಶಾಲೆಯಲ್ಲಿ ಓದುತ್ತಿರುವ ಸುಮಾರು 18 ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸದೆ ಶಾಲೆಗೆ ಬಹಿಷ್ಕಾರ ಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಇದು ಬೇರೆ ಬೇರೆ ರೂಪ ಪಡೆದುಕೊಂಡು ಶಿಕ್ಷಣ ಇಲಾಖೆಗೆ ತಲೆನೋವು ತರಿಸಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಗ್ರಾಮಾಂತರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಪಾಲಕರನ್ನು ಕರೆಸಿ ಮಾತುಕತೆ ನಡೆಸಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಎಂದಿನಂತೆ ಪಾಠ ನಡೆಯಲು ಅನುವು ಮಾಡಿಕೊಡಲಾಗಿದೆ ಎಂದು ನೆಲಮಂಗಲ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ತಿಳಿಸಿದ್ದಾರೆ.
ಇಲಾಖೆಗೆ ಮನವಿ:
ಗ್ರಾಮ ಪಂಚಾಯತಿ ಸದಸ್ಯ ಸತೀಶ್ ಮಾತನಾಡಿ ಈ ಶಾಲೆಯಲ್ಲಿ 1 ರಿಂದ 5 ತರಗತಿವರೆಗೆ 18 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಶಿಕ್ಷಕಿಯೊಬ್ಬರು ಸರಿಯಾಗಿ ಪಾಠ ಮಾಡುತ್ತಿಲ್ಲ ಎಂದು ಪಾಲಕರು ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಶಿಕ್ಷಣ ಇಲಾಖೆಗೆ ಗಮನಕ್ಕೆ ತರಲಾಗಿದೆ. ಇಲಾಖೆ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದೇವೆ ಎಂದು ಗ್ರಾಪಂ ಸದಸ್ಯ ಸತೀಶ್ ತಿಳಿಸಿದ್ದಾರೆ.

ದೇವರಹೊಸಹಳ್ಳಿ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿರುವ ಶಿಕ್ಷಕಿಯರ ವರ್ಗಾವಣೆ ಪ್ರಕರಣ ಸಂಬಂಧ ಈಗಾಗಲೇ ಎರಡ್ಮೂರು ಬಾರಿ ಪಾಲಕರ ಸಭೆ ಕರೆದು ಚರ್ಚೆ ನಡೆಸಲಾಗಿದ್ದು ಪಾಲಕರ ಮನವೊಲಿಸಲಾಗಿದೆ ಪಾಲಕರು ಸಹ ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪಿದ್ದಾರೆ ಈ ಎಲ್ಲ ಬೆಳವಣಿಗೆ ಕುರಿತು ಡಿಡಿಪಿಐ ಅವರಿಗೆ ವರದಿ ನೀಡಲಾಗುವುದು.

ಬಿ.ಸಿ.ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ನೆಲಮಂಗಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net