

ಸೋಮವಾರಪೇಟೆ : ಗ್ರಾಮೀಣ ಭಾಗದಲ್ಲಿ ಸ್ಥಾಪಿಸಿರುವ ವಿದ್ಯಾಸಂಸ್ಥೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.
ವಿದ್ಯಾಸಂಸ್ಥೆಯ ಮಹಾ ಪಾಲಕರಾದ ಹರಪಳ್ಳಿ ರವೀಂದ್ರ ನಿರ್ಮಿಸಿಕೊಟ್ಟಿರುವ ನೂತನ ಶಾಲಾ ಕಟ್ಟಡ ಲೋಕಾರ್ಪಣೆ ಹಾಗೂ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ-ಕ್ರೀಡಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ವರು ಮಾತನಾಡಿದರು.
ಬೆಟ್ಟದಳ್ಳಿಯಂತಹ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ವಿದ್ಯಾಭ್ಯಾಸ ನೀಡಬೇಕೆಂಬ ನಿಟ್ಟಿನಲ್ಲಿ ಕಟ್ಟಿ ಬೆಳೆಸಿರುವ ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ಶಾಸಕರ ನಿಧಿಯಿಂದ 5 ಲಕ್ಷ ರೂ, ಅನುದಾನ ಒದಗಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಜವಾಬ್ದಾರಿ ಪಾಲಕರ ಮೇಲಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳ ನಡುವಿನ ಶೈಕ್ಷಣಿಕ ಗುಣಮಟ್ಟದ ಅಂತರ ಕಡಿಮೆಯಾಗಬೇಕಿದೆ ಎಂದು ಶಾಸಕರು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಹರಪಳ್ಳಿ ರವೀಂದ್ರ ಮಾತನಾಡಿ, ಗುಡ್ಡಗಾಡು ಪ್ರದೇಶವಾಗಿರುವ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಬೆಟ್ಟದಳ್ಳಿಯಲ್ಲಿ ಈಗಾಗಲೇ ಆಂಗ್ಲಮಾಧ್ಯಮ ಶಿಕ್ಷಣ ಸಂಸ್ಥೆ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ವಸತಿ ನಿಲಯ ಸ್ಥಾಪನೆಗೆ ಚಿಂತನೆ ಹರಿಸಲಾಗಿದೆ ಎಂದರು.
ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಆಂಗ್ಲ ಮಾಧ್ಯಮದ ಶಿಕ್ಷಣ ನೀಡಬೇಕೆನ್ನುವ ಉದ್ದೇಶದಿಂದ ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿದ್ದು, ಮುಂದಿನ ದಿನಗಳಲ್ಲಿ ಪಟ್ಟಣ ಪ್ರದೇಶದ ಹೈಟೆಕ್ ವಸತಿ ಶಾಲೆಗಳಂತೆ ಬೆಟ್ಟದಳ್ಳಿಯಲ್ಲಿಯೂ ವಿದ್ಯಾರ್ಥಿ ವಸತಿ ನಿಲಯವನ್ನು ಸ್ಥಾಪಿಸಲಾಗುವುದು ಎಂದರು.
ಮತ್ತೋರ್ವ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ವಿದ್ಯಾರ್ಥಿಗಳು ತಮಗೆ ಲಭಿಸಿದ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪಾಲಕರುರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ಗಮನ ಹರಿಸಬೇಕೆಂದರು. ಶಾಲಾ ಸಲಹಾ ಸಮಿತಿ ಸದಸ್ಯ ಅರುಣ್ ಕೊತ್ನಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 2016ರಲ್ಲಿ ಶ್ರೀ ಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಯಲ್ಲಿ ಆಂಗ್ಲಮಾಧ್ಯಮ ಶಿಕ್ಷಣ ಅರಂಭಿಸಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಕೆ.ಕೆ. ಗೋಪಾಲ್, ಕಾರ್ಯದರ್ಶಿ ಕಾರ್ಯಪ್ಪ, ಪ್ರದೀಪ್‌ಕುಮಾರ್, ರಾಜೇಶ್, ಸದಸ್ಯರಾದ ಕೆ.ಎಂ. ಲೋಕೇಶ್, ಕೆ.ಕೆ. ಪೂವಯ್ಯ, ಯು.ಎಂ. ಬಸವರಾಜು, ಸಿ.ಪಿ. ದಿವ್ಯಕುಮಾರ್, ಜಿ.ಎಸ್. ಮಧುಕುಮಾರ್, ಬಿ.ಸಿ. ವೆಂಕಟೇಶ್, ಪೂವಯ್ಯ, ಪರಮೇಶ್, ಕಿಶನ್, ಆದರ್ಶ್, ಕೌಶಿಕ್, ಲಿಂಗರಾಜು, ಸುಧೀನ್ ಕುಮಾರ್, ರಾಧಿಕಾ ಕಾಳಪ್ಪ, ಲೀಲಾವತಿ, ಪ್ರವೀಣ್ ಇದ್ದರು.
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕರಾಟೆ ಹಾಗೂ ಯೋಗ ಪ್ರದರ್ಶನ ನಡೆಯಿತು. ವಾರ್ಷಿಕೋತ್ಸವ ಅಂಗವಾಗಿ ಪಾಲಕರಿಗೆ, ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.