

ಭೀಮಸಮುದ್ರ: ಶಿಕ್ಷಕರಲ್ಲಿ ವೃತ್ತಿ ಬದ್ಧತೆ ಇದ್ದರೆ ಕಲ್ಲಿನ ಮನಸ್ಥಿತಿಯ ಮಗುವಿನಲ್ಲಿ ಕೂಡ ಅಕ್ಷರ ಜ್ಯೋತಿ ಬೆಳಗಿಸುವುದು ಸಾಧ್ಯ ಎಂದು ಭೀಮಸಮುದ್ರ ವಿದ್ಯಾ ಸಂಸ್ಥೆ ಅಧ್ಯಕ್ಷ ಟಿ.ಜೆ.ದೇವಕುಮಾರ್ ಹೇಳಿದರು.
ಹೋಬಳಿಯ ಭೀಮೇಶ್ವರ ಬಾಲ ವಿಕಾಸ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿಯಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರತೆಗೆದು ಪೋಷಿಸಿದಾಗ ಮಾತ್ರ ಸಮಾಜಕ್ಕೆ ಅವರು ಉತ್ತಮ ಪ್ರಜೆಯಾಗುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.
ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎ.ಎಂ.ಧನ್ಯಕುಮಾರ್ ಮಾತನಾಡಿ, ಶಿಕ್ಷಕರು ಬೋಧಿಸುವ ವಿಷಯಗಳಲ್ಲಿ ಅಪಾರ ಜ್ಞಾನ ಹೊಂದಿರಬೇಕು. ತಮ್ಮ ವೃತ್ತಿಯನ್ನು ಪ್ರೀತಿಸುವವರಿಂದ ಇದೆಲ್ಲ ಸಾಧ್ಯವಾಗಲಿದೆ.
ವಿದ್ಯಾರ್ಥಿಯ ಕಲಿಕೆ ಮಟ್ಟವನ್ನು ಅರಿತು ಮಕ್ಕಳೊಂದಿಗೆ ಗೆಳೆಯರಾಗಿ ತಪ್ಪುಗಳನ್ನು ತಿದ್ದಲು ಸಲಹೆ ನೀಡಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಸಂಸ್ಥೆ ಆಡಳಿತಾಧಿಕಾರಿ ಎಚ್.ಮಂಜಣ್ಣ, ಶೆಟ್ರು ತಿಪ್ಪೇಸ್ವಾಮಿ, ಟಿ. ಬಸವರಾಜಪ್ಪ, ನಿರ್ದೇಶಕ ಟಿ.ಜೆ.ರಾಜಶೇಖರಪ್ಪ, ಎಂ.ಎನ್.ರಾಮು, ಮುಖ್ಯ ಶಿಕ್ಷಕ ಎಚ್.ನಾಗರಾಜ್, ಬಿ.ಎಚ್.ರುದ್ರಯ್ಯ, ಬಿ.ರವಿಕುಮಾರ್, ಎನ್.ಟಿ.ಸುಬ್ರಮಣ್ಯಂ, ಜ್ಯೋತಿ, ವಿನೋದ, ರವಿಕುಮಾರ್, ಸಂದೀಪ್, ಸಜೀಲಾಬಾನು, ನಾಗರಾಜ್ ಇದ್ದರು.