ಶಾಲೆಗಳಲ್ಲಿ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಿ

11SND-01
Published on


ಸಿಂಧನೂರು: ತಾಪಂಗೆ ಬಂದಿರುವ 2.30 ಕೋಟಿ ರೂ. ಅನುದಾನದಲ್ಲಿ ಶಾಲೆಗಳಲ್ಲಿ ಶೌಚಗೃಹ, ಸ್ಮಾರ್ಟ್ ಕ್ಲಾಸ್ ಸೌಲಭ್ಯ ಕಲ್ಪಿಸಬೇಕು. ಅಂಗನವಾಡಿ ಕೇಂದ್ರಗಳಲ್ಲೂ ಸೌಲಭ್ಯ ಒದಗಿಸಲು ಕ್ರಿಯಾ ಯೋಜನೆ ತಯಾರಿಸಬೇಕೆಂದು ಅಧಿಕಾರಿಗಳಿಗೆ ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ ಸೂಚಿಸಿದರು.

ನಗರದ ತಾಪಂ ಸಭಾಂಗಣದಲ್ಲಿ ಸೋಮವಾರ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಶಿಕ್ಷಣ, ಆರೋಗ್ಯ, ಪಶು ಇತರ ವಿವಿಧ ಇಲಾಖೆಗಳ ಮೂಲಕ ಅಗತ್ಯಕ್ಕೆ ತಕ್ಕಂತೆ ಕಾಮಗಾರಿ ಕೈಗೊಳ್ಳಲು ವರದಿ ತಯಾರಿಸಿಕೊಳ್ಳಬೇಕು. ಮುಖ್ಯವಾಗಿ ಶಾಲೆಗಳಲ್ಲಿ ಮೂಲ ಸೌಲಭ್ಯ ಒದಗಿಸಬೇಕು. ಶಾಲೆಗಳಲ್ಲಿ ಶೌಚಗೃಹ ಇಲ್ಲದ ಕಡೆ ನಿರ್ಮಾಣ ಮಾಡಬೇಕು ಎಂದರು.

ಉದ್ಯೋಗ ಖಾತ್ರಿ ಯೋಜನೆಯಡಿ ಕೂಡ ಶಾಲೆಗಳಲ್ಲಿ ಸೌಲಭ್ಯ ಒದಗಿಸಲಾಗಿದೆ. ಅನುದಾನ ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಈ ಹಿಂದೆ ಜಿಲ್ಲೆಯ 100 ಅಂಗನವಾಡಿ ಕೇಂದ್ರಗಳಿಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ, ಯಾರೂ ಬಳಕೆ ಮಾಡದೆ, ಮೂಲೆಯಲ್ಲಿಟ್ಟಿದ್ದರು. ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಡಿಜಿಟಲ್ ಗ್ರಂಥಾಲಯ ಒದಗಿಸಬೇಕಿದ್ದು ಸುಸಜ್ಜಿತ ಕಟ್ಟಡ ಇದ್ದರೆ ಅನುದಾನ ನೀಡಲಾಗುವುದು ಎಂದು ಶಶಿಕಾಂತ ಶಿವಪುರೆ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಮಾತನಾಡಿ, ಕುಡಿವ ನೀರಿಗಾಗಿ ಆರ್‌ಒ ಪ್ಲಾಂಟ್‌ಗಳ ಅಗತ್ಯವಿದ್ದು, ಈ ಬಗ್ಗೆ ವರದಿ ತಯಾರಿಸಲಾಗಿದೆ. ವಿವಿಧ ಶಾಲೆಗಳಲ್ಲಿ 150 ಶೌಚಗೃಹಗಳು ನಿರ್ಮಿಸಬೇಕಿದೆ. ಲಭ್ಯ ಅನುದಾನದಲ್ಲಿ ಬೆಂಚ್‌ಗಳನ್ನು ಖರೀದಿಸಲು ಅವಕಾಶ ಇದ್ದರೆ ಅನುಕೂಲವಾಗಲಿದೆ ಎಂದರು.
ಆರ್‌ಒ ಪ್ಲಾಂಟ್ ನಿರ್ಮಾಣ ಹಾಗೂ ಬೆಂಚ್‌ಗಳ ಖರೀದಿಗೆ ಅವಕಾಶ ಇದೆ. ಈ ಬಗ್ಗೆ ವರದಿ ಸಲ್ಲಿಸಿ ಎಂದು ಶಶಿಕಾಂತ ಶಿವಪುರೆ ತಿಳಸಿದರು. ಸಿಡಿಪಿಒ ಲಿಂಗನಗೌಡ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಕುಡಿವ ನೀರಿನ ಸೌಲಭ್ಯ, ಕಾಂಪೌಂಡ್ ನಿರ್ಮಾಣ ಮಾಡುವ ಬಗ್ಗೆ ಮಾಹಿತಿ ನೀಡಿದರು.
ತಾಪಂ ಅನುದಾನದ ಜತೆಗೆ ಉದ್ಯೋಗ ಖಾತ್ರಿ ಅನುದಾನ ಬಳಸಿಕೊಂಡು ಮೂಲ ಸೌಲಭ್ಯ ಒದಗಿಸಲು ಕ್ರಿಯಾ ಯೋಜನೆ ತಯಾರಿಸಲು ಸಭೆ ಅಸ್ತು ನೀಡಿತು. ತಾಪಂ ಇಒ ಚಂದ್ರಶೇಖರ. ಪಶು ಇಲಾಖೆ ಅಧಿಕಾರಿ ಡಾ.ಶರಣೇಗೌಡ ಪಾಟೀಲ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಯ್ಯನಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net