

ಕೊಲ್ಹಾರ: ಪಾಲಕರು ಸಭೆಯಲ್ಲಿ ಭಾಗವಹಿಸಿ ನಿಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲನೆ ಮಾಡುವ ಜತೆಗೆ ಶಾಲಾಭಿವೃದ್ಧಿಗೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡಿ, ಕೊರತೆ ನಿವಾರಿಸಲು ಸಹಕರಿಸಿ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ ಹೇಳಿದರು.
ತಾಲೂಕಿನ ರೋಣಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪಕಡ್ಡಿ ಗ್ರಾಮದ ಸರ್ಕಾರಿ ಪ್ರೌಢ (ಆರ್‌ಎಂಎಸ್‌ಎ) ಶಾಲೆಯಲ್ಲಿ ಜರುಗಿದ ಪಾಲಕರ ಸಭೆಯಲ್ಲಿ ಅವರು ಮಾತನಾಡಿದರು.
ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪಾಲಕರ ಸಹಭಾಗಿತ್ವ ಬಹು ಮುಖ್ಯವಾಗಿದೆ. ಪ್ರತಿ ತಿಂಗಳು 3ನೇ ಶನಿವಾರ ಅಂಗನವಾಡಿ ಕೇಂದ್ರಗಳಲ್ಲಿ ಮತ್ತು 4ನೇ ಶನಿವಾರ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಪಾಲಕರ ಸಭೆ ಆಯೋಜಿಸಲಾಗುತ್ತಿದೆ. ಎಲ್ಲ ಪಾಲಕರು ಕಡ್ಡಾಯವಾಗಿ ಪಾಲಕರ ಸಭೆಯಲ್ಲಿ ಭಾಗವಹಿಸಿ ಎಂದರು.
ಈಗಾಗಲೇ ಕಳೆದ ತಿಂಗಳು ಆಯೋಜಿಸಿದ ಪಾಲಕರ ಸಭೆಯಲ್ಲಿ ಹಲವಾರು ಜನರು ತಮ್ಮ ಸ್ಥಿತಿಗನುಸಾರ ಶಾಲೆಗೆ ಅವಶ್ಯಕವಾದ ಸಾಮಗ್ರಿ ಕೊಡುಗೆಯಾಗಿ ನೀಡಿದ್ದು ನಿಜಕ್ಕೂ ನಮಗೆ ಖುಷಿ ತಂದಿದೆ. ಪಾಲಕರು ಕೇವಲ ಸರ್ಕಾರದ ಸೌಲಭ್ಯಗಳ ಮೇಲೆ ಅವಲಂಬಿತರಾಗದೆ ಇದು ತಮ್ಮ ಶಾಲೆ ಎಂಬ ಮನೋಭಾವದಿಂದ ದೇಣಿಗೆ ನೀಡಿದ್ದಾರೆ. ಇದೇ ರೀತಿ ಎಲ್ಲ ಕಡೆ ಪಾಲಕರು ಅತ್ಯಂತ ಆಸಕ್ತಿಯಿಂದ ಭಾಗವಹಿಸಿದ್ದಲ್ಲಿ ಸರ್ಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಪ್ರಗತಿ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಪಂ ಇಒ ಎ್.ಎಚ್.ಪಠಣ ಮಾತನಾಡಿದರು. ಸ್ವಚ್ಛತಾ ಹೀ ಸೇವಾ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಪಿ.ಕೆ.ಬಿರಾದಾರ, ಗುರನಗೌಡ ಬಿರಾದಾರ, ಉದಯಕುಮಾರ್ ಹಳ್ಳಿ, ಎಸ್‌ಡಿಎಂಸಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಒ ಶ್ರೀಶೈಲ ಗಜಂಡಿಮಠ ಇತರರಿದ್ದರು.