

ಮಳವಳ್ಳಿ: ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜತೆಗೆ ಗುರು-ಹಿರಿಯರಿಗೆ ಗೌರವ ಕೊಡುವ ಹಾಗೂ ನಮ್ಮ ಸಂಸ್ಕೃತಿಯ ವಿಚಾರಧಾರೆಗಳ ಅರಿವು ಮೂಡಿಸಿದಾಗ ಮಾತ್ರ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ಆದರ್ಶ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೂರ್ತಿ ತಿಳಿಸಿದರು.
ತಾಲೂಕಿನ ಹುಚ್ಚನದೊಡ್ಡಿ ಬಳಿ ಇರುವ ಅಧ್ಯಯನ ವಿದ್ಯಾ ಟ್ರಸ್ಟ್ನ ಆದರ್ಶ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಕ್ಕಳ ಶಿಕ್ಷಣ ಕಲಿಕೆಗಾಗಿ ಪಾಲಕರು ಪೈಪೋಟಿಯಲ್ಲಿ ಇದ್ದಾರೆ. ವಿದ್ಯಾರ್ಥಿಗಳಿಗೆ ಟ್ಯೂಷನ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೊಡಿಸಿ ಅಂಕಗಳಿಸಲು ಒತ್ತಡ ಹೇರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಒತ್ತಡ ಹೇರುವುದರಿಂದ ಬಾಲ್ಯದಲ್ಲಿ ಆಟೋಟಗಳನ್ನು ಆಡುತ್ತಾ ಕುಟುಂಬದ ಒಡನಾಟ ಹಾಗೂ ಬಾಂಧವ್ಯಗಳ ಮಹತ್ವವನ್ನು ತಿಳಿದುಕೊಳ್ಳುವಲ್ಲಿ ವಂಚಿತರಾಗುತ್ತಿದ್ದಾರೆ. ನಾವೆಲ್ಲ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ, ಅಲ್ಲಿನ ಸಂಸ್ಕೃತಿಯ ಸೊಗಡನ್ನು ಅನುಭವಿಸುವುದರ ಜತೆಗೆ ಶಿಕ್ಷಣ ಕಲಿತು ಬೆಳೆದಿದ್ದೇವೆ. ಇಂದಿಗೂ ನಮ್ಮ ಬೆಳವಣಿಗೆಗೆ ಕಾರಣರಾದ ಹಿರಿಯರ ಸ್ಮರಿಸುತ್ತಾ ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಂಡಿದ್ದೇವೆ. ಆದರೆ ಪ್ರಸ್ತುತ ಕಾಲಮಾನದಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಸಂಬಂಧಗಳ ಬಗ್ಗೆ ತಿಳಿ ಹೇಳುವುದನ್ನೇ ಮರೆತು, ಕೇವಲ ಶಿಕ್ಷಣ ಕೊಡಿಸುವುದನ್ನೇ ಗುರಿಯಾಗಿಸಿಕೊಂಡಿದ್ದಾರೆ. ಇದರಿಂದ ಸಂಬಂಧಗಳ ಅರಿವಿನ ಕೊರತೆಯಿಂದ ಪಾಲಕರನ್ನು ವೃದ್ಧಾಪ್ಯದಲ್ಲಿ ತಾತ್ಸಾರ ಮನೋಭಾವದಿಂದ ನೋಡುವಂತಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜೆಎಸ್ಎಸ್ ಉನ್ನತ ಶಿಕ್ಷಣ ಸಂಸ್ಥೆ ಮತ್ತು ಸಂಶೋಧನಾ ಅಕಾಡೆಮಿ ಪ್ರಾಧ್ಯಾಪಕ ಭೀಮರಾಜು ಈರೇಗೌಡ, ರಾಗಿಬೊಮ್ಮನಹಳ್ಳಿ ಗ್ರಾಪಂ ಅಧ್ಯಕ್ಷ ಪ್ರಭು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು.
ಶಾಲೆಯ ಆಡಳಿತಾಧಿಕಾರಿ ವೈ.ಎಸ್.ಚಲುವರಾಜು, ಮುಖ್ಯ ಶಿಕ್ಷಕ ನಟರಾಜು, ಪಿಯು ಕಾಲೇಜು ಪ್ರಾಂಶುಪಾಲ ಅಶೋಕ, ಶೈಕ್ಷಣಿಕ ನಿರ್ದೇಶಕ ಐಶಾಕ್ ವರ್ಮ, ಗುಮಾಸ್ತ ಮರಿಮಾದಯ್ಯ ಇತರರು ಇದ್ದರು.