ಶಾಲೆ ಕಾಮಗಾರಿ ವಿಳಂಬ ಖಂಡಿಸಿ ಪ್ರತಿಭಟನೆ

mkg1a
Published on

ಜಗಳೂರು: ತಾಲೂಕಿನ ಹುಚ್ಚಂಗಿಪುರದಲ್ಲಿ ನಡೆಯುತ್ತಿರುವ ಸರ್ಕಾರಿ ಹಿರಿಯ ಮಾದರಿ ಶಾಲೆ ನಿರ್ಮಾಣ ಕಾಮಗಾರಿ ವಿಳಂಬನೀತಿ ಖಂಡಿಸಿ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾನಿರತ ಗ್ರಾಮಸ್ಥರು ಮಾತನಾಡಿ, ಮೂರು ವರ್ಷಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ. ಇದರಿಂದ ವಿದ್ಯಾರ್ಥಿಗಳಿಗೆ ತುಂಬ ತೊಂದರೆಯಾಗುತ್ತಿದೆ. ಕೂಡಲೇ ಕಾಮಗಾರಿ ಮುಗಿಸದಿದ್ದರೆ ವಿಧಾನ ಪರಿಷತ್ ಸದಸ್ಯರ ಮನೆ ಮುಂಭಾಗದಲ್ಲಿ ಮಕ್ಕಳ ಜತೆ ಪ್ರತಿಭಟನೆ ಕೂರಲಾಗುವುದು ಎಂದು ಎಚ್ಚರಿಸಿದರು.

300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿರುವ ಈ ಮಾದರಿ ಶಾಲೆ ಕಟ್ಟಡವು ದುಸ್ಥಿತಿಯಲ್ಲಿರುವುದರಿಂದ ಎಂಎಲ್‌ಸಿ ಎನ್. ರವಿಕುಮಾರ್ ಗ್ರಾಮದ ಶಾಲೆ ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುವ ಭರವಸೆ ನೀಡಿದ್ದರು. ಅದರಂತೆ 2020-21ನೇ ಸಾಲಿನಲ್ಲಿ ಶಾಲೆ ತೆರವುಗೊಳಿಸಿ ಎಲ್ಲ ವಿದ್ಯಾರ್ಥಿಗಳನ್ನು ಗ್ರಾಮದಲ್ಲಿದ್ದ ವಿದ್ಯಾರ್ಥಿ ನಿಲಯಕ್ಕೆ ಸ್ಥಳಾಂತರಿಸಲಾಗಿತ್ತು. ವರ್ಷದೊಳಗೆ ಕಾಮಗಾರಿ ಮುಗಿಸುವುದಾಗಿ ಭರವಸೆ ನೀಡಿದ್ದ ಗುತ್ತಿಗೆದಾರ ಮೂರುವರೆ ವರ್ಷಗಳಾದರೂ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರಂಭದಲ್ಲಿ 1.75 ಕೋಟಿ ರೂ. ಬಿಡುಗಡೆ ನಂತರ ಹೆಚ್ಚುವರಿಯಾಗಿ 25 ಲಕ್ಷ ಒಟ್ಟು 2 ಕೋಟಿಯಲ್ಲಿ ಶಾಲೆ ನಿರ್ಮಾಣವಾಗುತ್ತಿದೆ. ಗುತ್ತಿಗೆದಾರ ಕಟ್ಟಡ ಕಾಮಗಾರಿ ಮುಗಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯಾರ್ಥಿ ನಿಲಯದಲ್ಲಿ ಕೇವಲ 4 ಕೊಠಡಿಗಳಿದ್ದು 300 ಮಕ್ಕಳಿಗೆ ಸಾಕಾಗುತ್ತಿಲ್ಲ. ಹಾಗಾಗಿ, ಶಿಕ್ಷಕರು ಮರದ ಕೆಳಗೆ ತರಗತಿ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಂತೂ ಮಕ್ಕಳನ್ನು ನಿಭಾಯಿಸುವುದೇ ಶಿಕ್ಷಕರಿಗೆ ತಲೆ ನೋವಾಗಿದೆ. ಇದರಿಂದ ಕೆಲ ಮಕ್ಕಳು ಶಾಲೆಗೆ ಬರುವುದನ್ನೇ ಬಿಟ್ಟಿದ್ದಾರೆ ಎಂದು ದೂರಿದರು.

ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಎಚ್.ಜಿ. ನಾಗರಾಜ್, ಗ್ರಾಮ ಪಂಚಾಯತಿ ಸದಸ್ಯರಾದ ಬಿ.ಟಿ. ವೆಂಕಟೇಶ್, ರವಿ ಯು.ಸಿ. ಹುಚ್ಚಂಗಿಪುರ, ನಿಂಗರಾಜ್, ತಿಮ್ಮೇಶ್, ವೀರೇಶ್, ಗೂರಪ್ಪ, ವೆಂಕಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net