ಇನ್ನೂ ನಿರ್ಮಾಣವಾಗಿಲ್ಲ ಶಾಲಾ ಕಾಂಪೌಂಡ್ :ಕನ್ಯಾನ ಸ್ಕೂಲ್‌ಗೆ ಸುರಕ್ಷತೆಯ ಸಮಸ್ಯೆ: ಶೀಘ್ರ ನಿರ್ಮಿಸದಿದ್ದಲ್ಲಿ ಪ್ರತಿಭಟಿಸುವ ಎಚ್ಚರಿಕೆ

kanyana
ಕನ್ಯಾನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭ ತೆರವುಗೊಳಿಸಲಾಗಿದ್ದ ಕನ್ಯಾನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತಡಗೋಡೆ ಇನ್ನೂ ಮರುನಿರ್ಮಾಣವಾಗಿಲ್ಲ. 169ಎ ಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಶಾಲೆಯ ಆವರಣಗೋಡೆ ಎಂಟು ತಿಂಗಳ ಹಿಂದೆ ಅಗಲೀಕರಣಕ್ಕಾಗಿ ಕೆಡವಲಾಗಿದ್ದು, ನಿಯಮಾನುಸಾರ ಮರುನಿರ್ಮಿಸಬೇಕಿತ್ತು. ಆದರೆ ನೆಟ್ ಅಳವಡಿಸಿದ್ದು ಬಿಟ್ಟರೆ ಸೂಕ್ತ ವ್ಯವಸ್ಥೆಗಳಿಲ್ಲ. ಜತೆಗೆ ಶಾಲಾ ರಸ್ತೆಯ ಎರಡೂ ಬದಿ ಅಪಾಯಕಾರಿ ಚರಂಡಿ ಇದ್ದು, ಆದರೆ ಸೂಕ್ತ ರಕ್ಷಣಾ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಿ ಸಂಚರಿಸಬೇಕಿದೆ.

ಶಾಲಾವರಣದ ಹೆದ್ದಾರಿಯಲ್ಲಿ ಸೂಚನೆಗಳಿದ್ದರೂ ವಾಹನಗಳು ಅತಿವೇಗದಿಂದ ಸಂಚರಿಸುತ್ತಿದ್ದು, ಆವರಣಗೋಡೆಗಳು ಇಲ್ಲದಿರುವುರಿಂದ ಮಕ್ಕಳು ಹಠಾತ್ತನೆ ರಸ್ತೆಗೆ ಧಾವಿಸುತ್ತಾರೆ. ಇದರಿಂದ ಅಪಘಾತಗಳಾಗುವ ಸಂಭವಿದ್ದು, ಪಾಲಕರು ಮಕ್ಕಳನ್ನು ಶಾಲಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ.

ನಾಯಿಗಳ ಆವಾಸಸ್ಥಾನ

ಶಾಲೆ ಆವರಣ ಬೀದಿನಾಯಿಗಳ ವಾಸಸ್ಥಾನವಾಗಿದೆ. ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸುವ ಅಪಾಯವೂ ಇದ್ದು, ಜತೆಗೆ ಹಸುಗಳನ್ನೂ ಮೇಯಲು ಬಿಡಲಾಗುತ್ತಿದೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶೀಘ್ರವೇ ಆವರಣ ಗೋಡೆ ನಿರ್ಮಾಣವಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತಡೆಗೋಡೆ ಕೆಡವಿದ್ದ ಬಗ್ಗೆ ಹಿಂದೊಮ್ಮೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಿದ್ದರು. ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಕಾರ್ಯ ನಡೆಸದಿರುವ ಕುರಿತು ಅಧಿಕಾರಿಗಳ ಜತೆ ಮತ್ತೊಮ್ಮೆ ಸಮಾಲೋಚಿಸುತ್ತೇನೆ.-ಕೋಟ ಶ್ರೀನಿವಾಸ ಪೂಜಾರಿ, ಸಂಸದ.

ಭದ್ರತಾ ದೃಷ್ಟಿಯಿಂದ ಶಾಲೆಗೆ ಶೀಘ್ರವೇ ಆವರಣ ಗೋಡೆಯ ಅವಶ್ಯಕತೆ ಇದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಸಣ್ಣ ಸಣ್ಣ ಮಕ್ಕಳು ಅರಿಯದೆ ಹೊರಗೆ ಓಡಾಡಬಹುದು. ಶಾಲೆಯ ಮುಂಭಾಗದ ಚರಂಡಿ ಕೂಡ ಅಪಾಯಕಾರಿಯಾಗಿದೆ. ಅಧಿಕಾರಿಗಳು ಶೀಘ್ರವೇ ಕಾರ್ಯೋನ್ಮುಖರಾಗಬೇಕು.-ಶ್ವೇತಾ, ಮುಖ್ಯ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾನ

ಹೆದ್ದಾರಿ ಕಾಮಗಾರಿ ಸಂದರ್ಭ ತೆರವುಗೊಳಿಸಿದ ಆವರಣಗೋಡೆ ಮರುನಿರ್ಮಿಸುವಂತೆ ಮನವಿ ಮಾಡಲಾಗಿದ್ದು, ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಅಂಗನವಾಡಿ ಸಹಿತ ಒಟ್ಟು 90 ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುತ್ತಿದ್ದು, ಅವರ ಸುರಕ್ಷತೆ ಕುರಿತು ಆತಂಕವಾಗುತ್ತದೆ. ಶೀಘ್ರವೇ ಆವರಣಗೋಡೆ ನಿರ್ಮಿಸದಿದ್ದಲ್ಲಿ ಪ್ರತಿಭಟಿಸಲಾಗುವುದು.-ಅರುಣ್ ಶೆಟ್ಟಿ ಕನ್ಯಾನ, ಹಳೇ ವಿದ್ಯಾರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net