ಮೇ 31ರವರೆಗೆ ಶಾಲೆ, ಕಾಲೇಜು ರಜೆ: ಹಂತಹಂತವಾಗಿ ಲಾಕ್​ಡೌನ್ ಸಡಿಲಿಕೆ

CM BSY
Published on

ಬೆಂಗಳೂರು: ಅಗತ್ಯ ಸೇವೆಗಳ ಸರ್ಕಾರಿ ಕಚೇರಿಗಳನ್ನು ಶೇ. 50 ಸಿಬ್ಬಂದಿ ಯೊಂದಿಗೆ ನಡೆಸುವುದು, ಗಡಿಯಲ್ಲಿ ಸರಕು ಸಾಗಣೆಗೆ ಅವಕಾಶ, ಎಸಿ ಬಸ್, ಮೆಟ್ರೋ ರೈಲು ಹಾಗೂ ಎಸಿ ಅಂಗಡಿಗಳನ್ನು ತೆರೆಯದೇ ಲಾಕ್​ಡೌನ್ ಹಂತ ಹಂತವಾಗಿ ಹೇಗೆ ಸಡಿಲ ಮಾಡಬಹುದು ಎಂಬ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಜ್ಞರ ಸಮಿತಿ ಸರ್ಕಾರಕ್ಕೆ ಕೆಲವು ಶಿಫಾರಸು ಮಾಡಿದೆ.

ಹೃದ್ರೋಗ ತಜ್ಞ ಡಾ. ದೇವಿ ಶೆಟ್ಟಿ ಅಧ್ಯಕ್ಷತೆಯ ತಜ್ಞರ ಸಮಿತಿಯು ಲಾಕ್​ಡೌನ್ ಸಡಿಲಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬುಧವಾರ ವರದಿ ಸಲ್ಲಿಸಿತು. ಈ ಸಮಿತಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ್, ರಾಜೀವ್ ಗಾಂಧಿ ಆಸ್ಪತ್ರೆಯ ಡಾ. ನಾಗರಾಜ್, ಡಾ. ರವಿ ಹಾಗೂ ಡಾ. ಸುದರ್ಶನ್ ಅವರಿದ್ದಾರೆ. ಹಂತ ಹಂತವಾಗಿ ಲಾಕ್​ಡೌನ್ ಸಡಿಲಗೊಳಿಸುವುದು ಹೇಗೆ ಎಂಬ ಬಗ್ಗೆ ಈ ಸಮಿತಿ ಕೂಲಂಕಷವಾಗಿ ಪರಿಶೀಲಿಸಿ ವರದಿ ಸಲ್ಲಿಸಿದೆ. ಇದಕ್ಕಾಗಿ ಸಮಿತಿಯವರಿಗೆ ಸಿಎಂ ಕೃತಜ್ಞತೆಗಳನ್ನು ಸಲ್ಲಿಸಿದರು. ಮುಂದಿನ 6 ತಿಂಗಳವರೆಗೆ ಹೆಚ್ಚಿನ ಎಚ್ಚರ ವಹಿಸಬೇಕಾಗಿದೆ.

ಹಾಟ್​ಸ್ಪಾಟ್​ಗಳಲ್ಲಿ ಲಾಕ್​ಡೌನ್ ಮುಂದುವರಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ಸಮಿತಿಯ ಶಿಫಾರಸುಗಳನ್ನು ಪರಿಶೀಲಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ತಿಳಿಸಿದರು.

ಶಿಫಾರಸಿನ ಕೆಲವು ಮುಖ್ಯಾಂಶಗಳು

  • ಲಾಕ್​ಡೌನ್ ನಂತರ ಪ್ರಕರಣಗಳು ವರದಿಯಾದ ಪ್ರದೇಶದಲ್ಲಿ ಸ್ಥಳೀಯವಾಗಿ ಲಾಕ್​ಡೌನ್ ಮಾಡಬೇಕು.
  • ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಕಾಯ್ದುಕೊಳ್ಳುವುದನ್ನು ಮುಂದುವರಿಸಬೇಕು.
  • ಶಾಲೆ ಕಾಲೇಜುಗಳನ್ನು ಮೇ 31ರ ವರೆಗೆ ಮುಚ್ಚಬೇಕು. ಆನ್​ಲೈನ್ ತರಗತಿಗಳಿಗೆ ಪ್ರೋತ್ಸಾಹ ನೀಡಬೇಕು.
  • ಎ.ಸಿ. ಇಲ್ಲದ ಎಲ್ಲ ಅಂಗಡಿಗಳನ್ನು ತೆರೆಯಬಹುದು.
  • ಐಟಿ, ಬಿಟಿ ಉದ್ಯಮಗಳು, ಅತ್ಯವಶ್ಯ ಸೇವೆ ಒದಗಿಸುವ ಸರ್ಕಾರಿ ಕಚೇರಿಗಳು, ಕಾರ್ಖಾನೆಗಳಲ್ಲಿ ಶೇ.50 ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಬಹುದು.
  • ಅಂತಾರಾಜ್ಯ ಗಡಿಗಳಲ್ಲಿ ಸರಕು ಸಾಗಣೆ ವಾಹನಗಳಿಗೆ ಮಾತ್ರ ಪ್ರವೇಶ ನೀಡಬೇಕು.
  • ಸ್ಥಳೀಯ ಅಂಗಡಿಗಳು ಹೆಚ್ಚಿನ ಅವಧಿಗೆ ತೆರೆದಿಡುವ ಮೂಲಕ ಜನಸಂದಣಿ ಆಗದಂತೆ ಎಚ್ಚರ ವಹಿಸಬೇಕು. =ಅಂತಾರಾಜ್ಯ ರೈಲು ಸೇವೆ, ವಿಮಾನ ಸೇವೆಗಳನ್ನು ಸದ್ಯ ಪ್ರಾರಂಭಿಸಬಾರದು.
  • ಕೋವಿಡ್ ಪ್ರಕರಣಗಳು ವರದಿಯಾದಾಗ ಚಿಕಿತ್ಸೆಗೆ ವೈದ್ಯರು, ದಾದಿಯರು ಮತ್ತು ಇತರ ಅರೆ ವೈದ್ಯಕೀಯ ಸಿಬ್ಬಂದಿಗೆ ಸುರಕ್ಷಾ ಕಿಟ್​ಗಳನ್ನು ನೀಡಬೇಕು.
  • ಏಪ್ರಿಲ್ 12ರ ನಂತರ ರ್ಯಾಪಿಡ್ ಕಿಟ್​ಗಳ ಪೂರೈಕೆಯಾಗಲಿದ್ದು, ಕ್ವಾರಂಟೈನ್ ಮತ್ತು ಪರೀಕ್ಷಾ ಪ್ರಕ್ರಿಯೆಗಳು ಮತ್ತಷ್ಟು ಪರಿಣಾಮಕಾರಿ ಆಗಲಿವೆ.
  • ನಾನ್ ಕೋವಿಡ್ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು ಸಾಧ್ಯವಾದಷ್ಟು ಟೆಲಿ ಕನ್ಸಲ್ಟೇಷನ್ ನಡೆಸಬೇಕು. =ಜನರ ಅನವಶ್ಯಕ ಓಡಾಟಕ್ಕೆ ಕಡಿವಾಣ ಹಾಕಬೇಕು.
  • ಏಪ್ರಿಲ್ 30ರ ವರೆಗೆ ಎಸಿ ಬಸ್, ಮೆಟ್ರೋ ಸೇವೆ ಬೇಡ. =ಖಾಸಗಿ ವಾಹನಗಳ ಓಡಾಟಕ್ಕೆ ಸರಿ-ಬೆಸ ಸಂಖ್ಯೆಯ ಸೂತ್ರ ಅನುಸರಿಸಬೇಕು.
  • ಸಮಿತಿ ಮುಂದಿನ 15 ದಿನಗಳ ಅವಧಿಗೆ ಈ ಶಿಫಾರಸುಗಳನ್ನು ಮಾಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net