

ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪ ಗ್ರಾಪಂ ವ್ಯಾಪ್ತಿಯ ಹುಲ್ಕುತ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗದ್ದೆ ನಾಟಿ ಮಾಡುವುದರ ಮೂಲಕ ಕೃಷಿ ಅಧ್ಯಯನವನ್ನು ಬುಧವಾರದಿಂದ ಆರಂಭಿಸಲಾಯಿತು.
ಹತ್ತಿರದ ಹೆಮಜನಿ ಮಜರೆಯ ನಿತ್ಯಾನಂದ ಕನ್ನ ಗೌಡ ಅವರ ಗದ್ದೆಯಲ್ಲಿ ನಾಟಿ ಕಾರ್ಯ ಮಾಡಿದರು. ಪ್ರತಿವರ್ಷವೂ ಗದ್ದೆ ನಾಟಿ ಮಾಡುವುದರ ಮೂಲಕ ಕೃಷಿ ಅಧ್ಯಯನ ನಡೆಸುವ ಶಾಲಾ ಮಕ್ಕಳು ಈ ವರ್ಷವೂ ಇದನ್ನು ಮಂದುವರೆಸಿದ್ದಾರೆ. ಶಾಲೆಯ 4ರಿಂದ 6ನೇ ತರಗತಿಯ ಆಸಕ್ತ 12 ವಿದ್ಯಾರ್ಥಿಗಳು ಒಂದು ಗಂಟೆಯಲ್ಲಿ ಅಂದಾಜು 4.5 ಗುಂಟೆ ಕ್ಷೇತ್ರದಲ್ಲಿ ನಾಟಿ ಕಾರ್ಯ ಮಾಡಿದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಬಂಗಾರ್ಯ ಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಥಳೀಯರಾದ ಗೋವಿಂದ ಗಿರಿಯಾ ಗೌಡ, ಲೋಕೇಶ ಪದ್ಮನಾಭ ಗೌಡ, ಗದ್ದೆಯ ಮಾಲೀಕ ನಿತ್ಯಾನಂದ ಕನ್ನ ಗೌಡ, ಶಾಲಾಮುಖ್ಯ ಶಿಕ್ಷಕ ದರ್ಶನ ಹರಿಕಾಂತ ಇದ್ದರು.