ಪಠ್ಯೇತರ ಚಟುವಟಿಕೆಗೆ ಇರಲಿ ಆದ್ಯತೆ

dj nyk mla 1
Published on

ನಾಯಕನಹಟ್ಟಿ: ಪಾಠ ಜತೆಗೆ ಆಟ ಇದ್ದರೆ ಮಾತ್ರ ಜ್ಞಾನಾರ್ಜನೆಗೆ ಸಹಕಾರಿ ಆಗಲಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಕಡಬನಕಟ್ಟೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ತುರುವನೂರು ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಸನಕ್ಕೆ ಸಹಕಾರಿಯಾಗಲಿದೆ.

ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಎಲ್ಲ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಶ್ರದ್ಧೆಯಿಂದ ತೊಡಗಬೇಕು ಎಂದು ಕಿವಿಮಾತು ಹೇಳಿದರು.

ನನ್ನ ಹುಟ್ಟೂರು ಕಡಬನಕಟ್ಟೆಯಲ್ಲಿನ ಪ್ರಾಥಮಿಕ ಶಾಲೆಗೆ 102 ವರ್ಷಗಳು ತುಂಬಿದ್ದು, ಇದೊಂದು ಐತಿಹಾಸಿಕ ಮಹತ್ವದ್ದಾಗಿದೆ.

ಶಿಥಿಲಾವಸ್ಥೆ ತಲುಪಿದ್ದ ಶಾಲೆಯನ್ನು ಶಾಸಕರ 3 ಕೋಟಿ ರೂ. ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ.

ಶಾಲಾ ಕಟ್ಟಡ ನಿರ್ಮಾಣದ ಕಾರ್ಯ ಅಂತಿಮ ಹಂತದಲ್ಲಿದ್ದು, ಕೆಲಸ ಮುಕ್ತಾಯವಾಗುತ್ತಿದ್ದಂತೆ ಶಾಲೆಯ ಉದ್ಘಾಟನೆ ಮತ್ತು ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ತುರುವನೂರು ಹೋಬಳಿಯ 17 ಶಾಲೆಗಳ 500ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ಕಬಡ್ಡಿ, ಖೋ-ಖೋ, ವಾಲಿಬಾಲ್, ಥ್ರೋಬಾಲ್, ರಿಲೇ, ಅಥ್ಲೆಟಿಕ್ಸ್ ಸೇರಿ ಹಲವು ಪಂದ್ಯಾವಳಿ ಆಯೋಜಿಸಲಾಗಿತ್ತು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್, ತಾಪಂ ಮಾಜಿ ಅಧ್ಯಕ್ಷ ಲಿಂಗರಾಜ್, ಎಸ್‌ಡಿಎಂಸಿ ಅಧ್ಯಕ್ಷ ಪಿ.ಆರ್.ಬಾಬುರೆಡ್ಡಿ,

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ, ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ಮುಖ್ಯಶಿಕ್ಷಕ ಟಿ.ತಿಮ್ಮಾರೆಡ್ಡಿ, ಶಿಕ್ಷಕರಾದ ಎಂ.ವಿಶ್ವನಾಥ, ಜಿ.ಮಂಜಪ್ಪ, ಗಿರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net