ಬಸ್​ಗಳ ಅಕ್ರಮ ನೋಂದಣಿ ಇನ್ನಿಬ್ಬರ ಸೆರೆ

School Bus Scam in Karnataka
ಹೊಸಕೋಟೆಯಲ್ಲಿ ವಶಪಡಿಸಿಕೊಂಡಿರುವ ಬಸ್​ಗಳು.
Published on

ದಂಧೆ ಪಾಲುದಾರ, ಚಾಸ್ಸಿ ಟ್ಯಾಂಪರ್​ ಮಾಡುತ್ತಿದ್ದವ ಅಂದರ್​ : 9 ಇನ್​ಸ್ಪೆಕ್ಟರ್​ಗಳ ಹೆಸರು ಕೊಟ್ಟ ಆರ್​ಟಿಒ

ಬೆಂಗಳೂರು: ಬಸ್​ಗಳ ಅಕ್ರಮ ನೋಂದಣಿ ಬಗ್ಗೆ "ವಿಜಯವಾಣಿ' ಪ್ರಕಟಿಸಿದ ವಿಶೇಷ ವರದಿಯನ್ನು ಆಧರಿಸಿ ತನಿಖೆ ಮುಂದುವರಿಸಿರುವ ಬೆಂಗಳೂರು ಗ್ರಾಮಾಂತರ ಪೊಲೀಸರು, ದಂಧೆಯಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಏತನ್ಮಧ್ಯೆ ಅಕ್ರಮ ನೋಂದಣಿ ಎಂದು ದೃಢಪಟ್ಟಿರುವ 95 ಬಸ್​ಗಳನ್ನು ತಪಾಸಣೆ ನಡೆಸಿದ 9 ಮೋಟಾರು ವಾಹನ ನಿರೀಕರ ಹೆಸರುಗಳನ್ನು ಕೋಲಾರ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್​ಟಿಒ) ಲಿಖಿತ ರೂಪದಲ್ಲಿ ತನಿಖಾಧಿಕಾರಿಗಳಿಗೆ ಕೊಟ್ಟಿದ್ದು, ಅವರನ್ನು ವಿಚಾರಣೆ ನಡೆಸಲು ಸಿದ್ಧತೆ ನಡೆದಿದೆ.
ಆಂಧ್ರಪ್ರದೇಶದ ರಾಮಚಂದ್ರರೆಡ್ಡಿ ಮತ್ತು ತಮಿಳುನಾಡು ವೆಲ್ಲೂರಿನ ನವೀನ್​ ಬಂಧಿತರು. ಇದಕ್ಕೂ ಮುನ್ನ ಎಸ್​ಎಸ್​ಪಿ ಮೋಟಾರ್ಸ್​ನ ಮಾಲೀಕ ವೇಣುಗೋಪಾಲ ರೆಡ್ಡಿ, ಮ್ಯಾನೇಜರ್​ ಚಿರಂಜೀವಿ, ಸೂಪರ್​ವೈಸರ್​ ಶ್ರೀನಿವಾಸ್​, ರಾಜು ಹಾಗೂ ಕೋಲಾರ ಆರ್​ಟಿಒ ಕಚೇರಿ ಏಜೆಂಟ್​ ನವೀನ್​ನ್ನು ಬಂಧಿಸಲಾಗಿತ್ತು. ಬಂಧಿತರು ಕೊಟ್ಟ ಮಾಹಿತಿ ಮೇರೆಗೆ ರಾಮಚಂದ್ರ ರೆಡ್ಡಿ ಹಾಗೂ ನವೀನ್​ನನ್ನು ಬಂಧಿಸಿ ಕರೆತರಲಾಗಿದೆ. ಪ್ರಮುಖ ಆರೋಪಿ ವೇಣುಗೋಪಾಲ ರೆಡ್ಡಿ ಹಾಗೂ ರಾಮಚಂದ್ರ ರೆಡ್ಡಿ ಪಾಲುದಾರರಾಗಿ ಗ್ಯಾರೇಜ್​ ಆರಂಭಿಸಿದ್ದರು. ನವೀನ್​ ಚಾಸ್ಸಿ ನಂಬರ್​ ಟ್ಯಾಂಪರ್​ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರ್​ಟಿಒ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯಲೋಪ ಎಸಗಿರುವುದು ಈವರೆಗಿನ ತನಿಖೆಯಲ್ಲಿ ದೃಢಪಟ್ಟಿದೆ. ವಾಹನಗಳ ನೋಂದಣಿಗೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು ಸಂಗ್ರಹಿಸಲಾಗುತ್ತಿದೆ. ಯಾರನ್ನೂ ವಿಚಾರಣೆ ನಡೆಸಿಲ್ಲ. ದಾಖಲಾತಿಗಳ ಪರಿಶೀಲನೆ ನಂತರ ವಿಚಾರಣೆ ನಡೆಸಲಾಗುತ್ತದೆ. ಆವಲಹಳ್ಳಿ ಪೊಲೀಸ್​ ಠಾಣೆ ಇನ್​ಸ್ಪೆಕ್ಟರ್​ ಜಿ.ಸೋಮಶೇಖರ್​ ನೇತೃತ್ವದ ವಿಶೇಷ ತಂಡ ತನಿಖೆ ಮುಂದುವರಿಸಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಸ್​ಗಳ ತಪಾಸಣೆ ನಡೆಸಿದ್ಯಾರು?

95 ಬಸ್​ಗಳು ಅಕ್ರಮ ನೋಂದಣಿ ಯಾಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಆದರೆ, ಈ ಬಸ್​ಗಳನ್ನು ನೋಂದಣಿ ಮಾಡಿದ್ದು ಹಾಗೂ ಬೇರೆಡೆಗೆ ಎನ್​ಒಸಿ ಕೊಟ್ಟಿದ್ದಾಗಿ 9 ಬ್ರೇಕ್​ ಇನ್​ಸ್ಪೆಕ್ಟರ್​ಗಳ ಹೆಸರುಗಳನ್ನು ತನಿಖಾ ತಂಡಕ್ಕೆ ಖುದ್ದು ಕೋಲಾರ ಆರ್​ಟಿಒ ಅಧಿಕಾರಿಯೇ ಕೊಟ್ಟಿದ್ದಾರೆ. ಇದರಲ್ಲಿ ಸಿ.ಸತೀಶ್​, ಮಹದೇವಪ್ಪ, ಎ.ಕೃಷ್ಣಮೂರ್ತಿ, ಆರ್​.ದೇವೇಂದ್ರಪ್ರಸಾದ್​, ನಾಗರಾಜ್​ ಎಸ್​.ನಾಯಕ್​, ಕೆ.ಎನ್​.ಗೋಪಿಕೃಷ್ಣ, ಎಚ್​.ಎಸ್​.ಹೇಮಂತ್​, ಟಿ.ಎಸ್​.ರವಿಶಂಕರ್​ ಹಾಗೂ ಜಿ.ಎನ್​.ಸುರೇಶ್​ ಹೆಸರುಗಳಿವೆ. ಈ 9 ಇನ್​ಸ್ಪೆಕ್ಟರ್​ಗಳನ್ನು ವಿಚಾರಣೆಗೆ ಕರೆಯಲು ತನಿಖಾಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಪೊಲೀಸ್​ ತನಿಖೆ ಆಳಕ್ಕೆ ಹೋದಷ್ಟೂ ಭೀತಿಗೆ ಒಳಗಾಗಿರುವ ಆರ್​ಟಿಒ ಕಚೇರಿ ಸಿಬ್ಬಂದಿ, ಅಕ್ರಮ ನೋಂದಣಿ ಜಾಲದಿಂದ ತಪ್ಪಿಸಿಕೊಳ್ಳಲು ಒಬ್ಬರು ಇನ್ನೊಬ್ಬರತ್ತ ಬೊಟ್ಟು ಮಾಡುತ್ತಿದ್ದಾರೆ.

ಕಚೇರಿಯಲ್ಲಿ ಕೆಲಸಗಳೆಲ್ಲ ಸ್ಥಗಿತ

ಅಕ್ರಮ ಬಸ್​ಗಳ ದಂಧೆ ಬೆಳಕಿಗೆ ಬಂದಾಗಿನಿಂದ ಆರ್​ಟಿಒ ಅಧಿಕಾರಿ ಮತ್ತು ಸಿಬ್ಬಂದಿ ಪೊಲೀಸ್​ ತನಿಖೆ ಎದುರಿಸುವಲ್ಲೇ ನಿರತರಾಗಿದ್ದಾರೆ. ಸಾರ್ವಜನಿಕರಿಗೆ ಸರಿಯಾಗಿ ಸೇವೆಗಳು ಲಭ್ಯವಾಗದೆ ಪ್ರತಿನಿತ್ಯ ಕಚೇರಿಗೆ ಬಂದು ಹೋಗುವ ಸಂಕಷ್ಟ ಎದುರಾಗಿದೆ. ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಎತ್ತಂಗಡಿ ಮಾಡಿ ಬೇರೆಯವರನ್ನು ಕಚೇರಿಗೆ ನಿಯೋಜಿಸುವಂತೆ ಸರ್ಕಾರಕ್ಕೆ ನಾಗರಿಕರು ಒತ್ತಾಯಿಸಿದ್ದಾರೆ.

ಡೀಲ್​ನಲ್ಲಿ ಇನ್ನೊಬ್ಬ ಏಜೆಂಟ್​?

ದಂಧೆಯಲ್ಲಿ ಆರ್​ಟಿಒ ಕಚೇರಿಯ ಇನ್ನೊಬ್ಬ ಏಜೆಂಟ್​ ಪಾತ್ರವಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕಚೇರಿ ಅಧಿಕಾರಿ ಮತ್ತು ಸಿಬ್ಬಂದಿಗೆ ಟೀ ಕೊಡುವ ಕೆಲಸ ಮಾಡುವ ಈತ ಇನ್​ಸ್ಪೆಕ್ಟರ್​ಗಳಿಗೆ ಸಂಬಂಧಿಸಿದ ಎಲ್ಲ ಡೀಲ್​ಗಳನ್ನು ಕುದುರಿಸುತ್ತಾನೆ. ಈಗಾಗಲೇ ಬಂಧಿತ ಆರ್​ಟಿಒ ಏಜೆಂಟ್​ ನವೀನ್​ನ ಜತೆ ಈತ ಸಂಪರ್ಕ ಹೊಂದಿದ್ದು, ನವೀನ್​ ತಂದುಕೊಟ್ಟ ದಾಖಲಾತಿಗಳನ್ನು ಆರ್​ಟಿಒ ಮತ್ತು ಇನ್​ಸ್ಪೆಕ್ಟರ್​ಗಳಿಗೆ ತಲುಪಿಸುತ್ತಿದ್ದ. ವಸೂಲಿಯಾದ ಹಣದ ಲೆಕ್ಕಚಾರ ಈತನೇ ಮಾಡುತ್ತಿದ್ದ ಎಂದು ಹೇಳಲಾಗಿದೆ. ಈತ ಕಚೇರಿಯಲ್ಲಿ ಐಎಂವಿ…..ಎಂದೇ ಚಿರಪರಿಚಿತ ಎಂದು ಗೊತ್ತಾಗಿದೆ.

2 ದಿನದಲ್ಲಿ ಅರುಣಾಚಲಕ್ಕೆ ತಂಡ
ವಾಹನಗಳ ಅಕ್ರಮ ನೋಂದಣಿ ಮೂಲ ಅರುಣಾಚಲಪ್ರದೇಶದ ಆರ್​ಟಿಒದಲ್ಲಿದೆ. ಅಲ್ಲಿಂದ ಎನ್​ಒಸಿ ಸಿಕ್ಕಿರುವುದರಿಂದ ಇಲ್ಲಿ ನೋಂದಣಿ ಮಾಡಿರುವುದಾಗಿ ಆರ್​ಟಿಒ ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ 2 ದಿನದಲ್ಲಿ ಒಂದು ತಂಡ ಅರುಣಾಚಲಕ್ಕೆ ಹೋಗಿ ಮಾಹಿತಿ ಪಡೆಯಲಿದೆ. ಅಲ್ಲಿನ ದಾಖಲಾತಿಗಳ ಪರಿಶೀಲಿಸಿದ ನಂತರ ಪ್ರಕರಣಕ್ಕೆ ಸ್ಪಷ್ಟತೆ ಸಿಗಲಿದೆ ಎಂದು ಹೊಸಕೋಟೆ ಉಪ ವಿಭಾಗದ ಡಿವೈಎಸ್ಪಿ ಶಂಕರಗೌಡ ಎ.ಪಾಟೀಲ್​ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net