

ಸವಣೂರ: ಶಾಲಾ ವಾಹನ ಚಾಲನೆ ವೇಳೆ ಚಾಲಕನಿಗೆ ಹೃದಯಾಘಾತವಾದ ಘಟನೆ ತಾಲೂಕಿನ ಹೊಸಳ್ಳಿ ಹಾಗೂ ಕಳಲಕೊಂಡ ಗ್ರಾಮ ಮಧ್ಯೆ ಬುಧವಾರ ನಡೆದಿದೆ.
ಪಟ್ಟಣದ ಐ.ಎಸ್. ಮರೋಳ ಆಂಗ್ಲ ಮಾಧ್ಯಮ ಶಾಲೆಯ ಬಸ್ ಚಾಲಕ ಫಕೀರೇಶ ಉಮೇಶ ಮಲ್ಲೇಶಣ್ಣನವರ (25) ಮೃತ ದುರ್ದೈವಿ. ಎದೆನೋವು ಕಾಣಿಸಿಕೊಳ್ಳುತ್ತಿದ್ದಂತೆ ಫಕೀರೇಶ ಬಸ್ ನಿಲ್ಲಿಸಿ, ವಿದ್ಯಾರ್ಥಿಗಳಿಂದ ನೀರು ಪಡೆದು ಕುಡಿದ ಕೆಲ ಹೊತ್ತಿನಲ್ಲಿಯೇ ಪ್ರಾಣ ಬಿಟ್ಟಿದ್ದಾನೆ ಎನ್ನಲಾಗಿದೆ. ಚಾಲಕನ ಸಮಯ ಪ್ರಜ್ಞೆಯಿಂದ 18 ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರತಿದಿನ 45 ವಿದ್ಯಾರ್ಥಿಗಳನ್ನು ಗ್ರಾಮೀಣ ಪ್ರದೇಶಗಳಿಗೆ ಬಿಟ್ಟು ಬರಲಾಗುತ್ತಿತ್ತು. ಸವಣೂರಿನಿಂದ ಹೊರಟು, ಹುರಳಿಕುಪ್ಪಿ, ತೊಂಡೂರು, ಹೊಸಳ್ಳಿ, ತಳ್ಳಳ್ಳಿ ಮಾರ್ಗವಾಗಿ ಕಳಲಕೊಂಡ ಗ್ರಾಮಕ್ಕೆ ಮುಕ್ತಾಯಗೊಳ್ಳುತ್ತಿತ್ತು. ತಳ್ಳಳ್ಳಿ ಗ್ರಾಮದಲ್ಲಿ ವಿದ್ಯಾರ್ಥಿಗಳನ್ನು ಇಳಿಸಿ ಕಳಲಕೊಂಡಕ್ಕೆ ಹೊರಡುವಾಗ ಘಟನೆ ಸಂಭವಿಸಿದೆ. ಮಕ್ಕಳ ಚೀರಾಟ ಕೇಳಿ ದಾರಿಹೋಕರು ಶಾಲೆಯವರಿಗೆ ಮಾಹಿತಿ ನೀಡಿದ್ದಾರೆ. ಮತ್ತೊಬ್ಬರು ಬಸ್‌ನ್ನು ಕಳಲಕೊಂಡಕ್ಕೆ ತೆಗೆದುಕೊಂಡು ಹೋಗಿ ವಿದ್ಯಾರ್ಥಿಗಳನ್ನು ಇಳಿಸಿ ಸವಣೂರ ಸಾರ್ವಜನಿಕ ಆಸ್ಪತ್ರೆಗೆ ಚಾಲಕ ಫಕೀರೇಶನನ್ನು ಕರೆ ತಂದಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಸಾವನ್ನಪ್ಪಿದ ಕುರಿತು ಖಚಿತಪಡಿಸಿದ್ದಾರೆ. ಸವಣೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫಕೀರೇಶನಿಗೆ ತಂದೆ, ತಾಯಿ ಹಾಗೂ ಸಹೋದರಿ ಇದ್ದಾರೆ. ಮೃತ ಚಾಲಕನ ಮನೆಯಲ್ಲಿ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು. ತಂದೆ ಉಮೇಶ ಪಾರ್ಶುವಾಯುದಿಂದ ಬಳಲುತ್ತಿದ್ದಾರೆ.