

ವಿಜಯವಾಣಿ ಸುದ್ದಿಜಾಲ ದಾಬಸ್ಪೇಟೆ
ಸರ್ಕಾರಿ ಶಾಲೆಯೊಂದರ ಕಟ್ಟಡ ಕೆಡವಿದ ಆರೋಪದ ಮೇಲೆ ಗಂಗೇನಪುರದ ವ್ಯಕ್ತಿಯೊಬ್ಬನ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲಮಂಗಲ ತಾಲೂಕು ಸೋಂಪುರ ಹೋಬಳಿ ಶಿವಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗೇನಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ಕೆಡವಿದ ಅರೋಪದ ಮೇಲೆ ಭಾನುಪ್ರಕಾಶ್ ಎಂಬುವರ ಮೇಲೆ ಶಾಲೆಯ ಮುಖ್ಯಶಿಕ್ಷಕಿ ನಾಗರತ್ನ ದಾಬಸ್ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಹಿಂದೆ ಇಲ್ಲಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಯನಿರ್ವಹಿಸುತ್ತಿತ್ತು. ಅದರೆ ಕ್ರಮೇಣ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾದ ಕಾರಣ ಈ ಶಾಲೆಯನ್ನು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಡಿಸಲಾಯಿತು. ಸುಮಾರು 20 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಭಾನುವಾರ ಜೆಸಿಬಿ ಬಳಸಿ ಕಟ್ಟಡವನ್ನು ನೆಲಸಮ ಮಾಡಲಾಗಿದ್ದು, ಕಟ್ಟಡ ಕೆಡವಿದ ಆರೋಪದ ಮೇಲೆ ಪೊಲೀಸರು ಭಾನುಪ್ರಕಾಶ್ಗಾಗಿ ಹುಡುಕಾಟ ನಡೆಸಿದ್ದಾರೆ.
ಜಾಗ ತಮ್ಮದೆಂಬ ಕಾರಣ: ಭಾನುಪ್ರಕಾಶ್ ಅವರ ಪತ್ನಿ ಹೆಸರಿನಲ್ಲಿರುವ ಜಮೀನಿನಲ್ಲೇ ಶಾಲೆ ಕಟ್ಟಡವಿದೆ ಎನ್ನಲಾಗಿದೆ. ಆದರೆ 2020ರಲ್ಲಿ ಪಂಚಾಯಿತಿ ಮೂಲಕ ಭಾನುಪ್ರಕಾಶ್ ಅವರ ಮಾವ ಶಾಲೆಗೆ 2 ಗುಂಟೆ ಜಾಗವನ್ನು ದಾನವಾಗಿ ನೀಡಿದ್ದರು ಎನ್ನಲಾಗಿದೆ ಆದರೆ ಶಾಲೆ ಕಟ್ಟಡ ಇರುವುದು ನಮ್ಮ ಜಮೀನಿನಲ್ಲಿ ಎಂಬ ಕಾರಣಕ್ಕೆ ಈ ಕೃತ್ಯ ಎಸಲಾಗಿದೆ ಎನ್ನಲಾಗಿದೆ.
ಸದಸ್ಯ ಆಕ್ರೋಶ: ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಣ ಪಡೆದ ಬಹುತೇಕರು ಉನ್ನತ ಹುದ್ದೆಗಳಿದ್ದಾರೆ. ಇಂಥ ಶಾಲೆ ಕಟ್ಟಡ ನೆಲಸಮ ಮಾಡಿರುವುದು ಅಕ್ಷಮ್ಯ. ಇದಕ್ಕೆ ಇವರಿಗೆ ಅನುಮತಿ ಕೊಟ್ಟವರು ಯಾರು ಎಂದು ಶಿವಗಂಗೆ ಗ್ರಾಪಂ ಸದಸ್ಯ ದಿನೇಶ್ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನೇಕರು ಓದಿ ಇನ್ನು ಅತ್ಯುನ್ನತ ಸ್ಥಾನದಲ್ಲಿದ್ದಾರೆ ಅದನ್ನು ಕೆಡವಲು ಇವರಿಗೆ ಅನುಮತಿ ಕೋಟ್ಟವರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ , ಶಾಲೆಯ ಮುಖ್ಯಸ್ಥರು ದಾಬಸ್ ಪೇಟೆ ಠಾನೆಗೆ ಕಂಪ್ಲೆಟ್ ನೀಡಿದ್ದಾರೆ ಎಂದರು. ದಾಬಸ್ ಪೋಲಿಸ್ ಠಾಣೆಯ ಪೋಲಿಸ್ ಯವರು ಬಂದು ಪರಿಶಿಲಿಸಿದ್ದಾರೆ, ಕಂದಾಯ ಅಧಿಕಾರಿಗಳು ಬಂದು ಸ್ಥಳವನ್ನು ಪರಿಶಿಲಿಸಿದ್ದಾರೆ.
ಜಾಗ ಶಿಕ್ಷಣ ಇಲಾಖೆಗೆ ಸೇರಿದೆ: ನಮ್ಮ ಶಾಲೆಯ ಕಟ್ಟಡ ನಮ್ಮ ಶಿಕ್ಷಣ ಇಲಾಖೆಗೆ ಸೇರಿದೆ, ಅದರ ದಾಖಲಾತಿ ನಮ್ಮಲ್ಲೆ ಇದೆ. 1995ರಿಂದ ಶಾಲೆ ಸಂಬಂಧಪಟ್ಟ ಎಲ್ಲ ದಾಖಲೆಗಳಿದ್ದರೂ ವ್ಯಕ್ತಿಯೊಬ್ಬ ಕಟ್ಟಡ ಕೆಡವಿರುವುದು ಅಪರಾಧವಾಗಿದೆ ಈ ಹಿನ್ನೆಲೆಯಲ್ಲಿ ದಾಬಸ್ಪೇಟೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಬಿಇಒ ಎಂ.ಎಚ್.ತಿಮ್ಮಯ್ಯ ತಿಳಿಸಿದ್ದಾರೆ.