ಸರ್ಕಾರಿ ಶಾಲೆಗಳಿಗೆ ಬೇಕು ಕಾಯಕಲ್ಪ

nela
Published on

 ಜಿ.ಕೆ.ಸುಗ್ಗರಾಜು ನೆಲಮಂಗಲ

ನಗರ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಗೊಂಡಿರುವುದರ ಜತೆಗೆ ಕೆಲವೊಂದು ಮೂಲಸೌಕರ್ಯ ಕೊರತೆ ಎದುರಾಗಿರುವುದು ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬ ಆತಂಕ ಎದುರಾಗಿದೆ.

ತಾಲೂಕಿನಾದ್ಯಂತ ಸರ್ಕಾರಿ ಶಾಲೆಗಳು ಪ್ರಾರಂಭವಾಗಿ ಹಲವು ದಿನಗಳು ಕಳೆದಿದ್ದು, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ ವಿತರಣೆಯೊಂದಿಗೆ ಸಿಹಿ ಹಂಚಿ ಮಕ್ಕಳನ್ನು ಸ್ವಾಗತಿಸಲಾಗಿದೆ. ಪ್ರಸಕ್ತ ಹಲವು ಶಾಲೆಗಳು ಖಾಸಗಿ ಶಾಲೆಗಳನ್ನು ಮೀರಿಸುವಷ್ಟು ಉತ್ತಮವಾಗಿವೆ. ಆದರೆ ಕೆಲವೊಂದು ಶಾಲೆಗಳಲ್ಲಿ ಮೇಲ್ಛಾವಣಿ, ಕೊಠಡಿ, ಶೌಚಗೃಹ, ಆವರಣ ಗೋಡೆ ಶಿಥಿಲ ಹಲವು ಸಮಸ್ಯೆಗಳು ಇನ್ನೂ ಜೀವಂತವಾಗಿರುವುದು ವಿಪರ್ಯಾಸವಾಗಿದೆ.

ಅನುದಾನಕ್ಕೆ ಕೊರತೆ ಇಲ್ಲ: ತಾಲೂಕಿನಲ್ಲಿ 274 ಸರ್ಕಾರಿ ಪ್ರಾಥಮಿಕ, 11 ಪ್ರೌಢ ಶಾಲೆ ಸೇರಿ 285 ಸರ್ಕಾರಿ ಶಾಲೆಗಳಿವೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಕೊಠಡಿಗಳ ದುರಸ್ತಿ ಕಾರ್ಯಕ್ಕೆ ಶಿಕ್ಷಣ ಇಲಾಖೆ ಸರ್ಕಾರಕ್ಕೆ 107 ಕೊಠಡಿಗಳ ಮಾಹಿತಿ ನೀಡಿತ್ತು. ಅದರಂತೆ ವಿವೇಕ ಯೋಜನೆಯಡಿ 19 ಶಾಲೆಗಳಿಗೆ 21 ಕೊಠಡಿ ನಿರ್ಮಾಣಕ್ಕೆ 2.94 ಕೋಟಿ ಅನುದಾನ ಬಿಡುಗೆಯಾಗಿದ್ದು, ಕಾಮಗಾರಿ ಪೂರ್ಣಗೊಂಡಿದೆ. ಜತೆಗೆ ರಾಜ್ಯ ವಲಯ ಮುಂದುವರೆದ ಯೋಜನೆಡಿಯಡಿ ಹೊಸ ಕೊಠಡಿ ನಿರ್ಮಾಣಕ್ಕೆ ತಾಲೂಕಿನ ಗುರುವನಹಳ್ಳಿ, ಬಾಪೂಜಿನಗರ, ಅಂಬೇಡ್ಕರ್ ನಗರ, ಸೂಲ್ಕುಂಟೆ, ಗುಂಡೇನಹಳ್ಳಿ, ಮಾಚೋನಾಯಕನಹಳ್ಳಿ ಸೇರಿ 6 ಶಾಲೆಗಳ ನೂತನ ಕೊಠಡಿ ನಿರ್ಮಾಣಕ್ಕೆ ತಲಾ 14.5 ಲಕ್ಷ ರೂಪಾಯಿಯಂತೆ 87 ಲಕ್ಷ ರೂ.ಅನುದಾನ ಬಿಡುಗಡೆಯಾಗಿ ಟೆಂಡರ್ ಸಹ ಮುಕ್ತಾಯಗೊಂಡಿದೆ. ಕೆಲ ದಿನಗಳಲ್ಲಿ ಕೆಲಸ ಆರಂಭವಾಗಲಿದೆ. 2024-25ನೇ ಸಾಲಿನಲ್ಲಿ 9 ಶಾಲೆಗಳಿಗೆ ತಲಾ ಒಂದೊಂದು ಕೊಠಡಿಯ ದುರಸ್ತಿ ಕಾಮಗಾರಿಗೆ 16ಲಕ್ಷ ರೂ. ಅನುದಾನದಲ್ಲಿ ಬಿಡುಗಡೆಯಾಗಿರುವ ಮಾಹಿತಿ ಲಭ್ಯವಾಗಿದೆ.

ಕಾಮಗಾರಿಗಳು ಪೂರ್ಣ: 2024-25ನೇ ಸಾಲಿನಲ್ಲಿ ತಾಲೂಕಿನ ಓಬನಾಯಕನಹಳ್ಳಿ ಸರ್ಕಾರಿ ಶಾಲೆಗೆ ಖಾಸಗಿ ಕಂಪನಿಯಿಂದ 5ಲಕ್ಷ ರೂ.ವೆಚ್ಚದಲ್ಲಿ 2 ಶಾಲಾ ಕೊಠಡಿ, ಮದಲಕೋಟೆ ಶಾಲೆಗೆ ಹಳೇ ವಿದ್ಯಾರ್ಥಿ ಹಾಗೂ ಗ್ರಾಮಸ್ಥರ ಸಹಕಾರದಿಂದ 25 ಲಕ್ಷ ರೂ.ವೆಚ್ಚದಲ್ಲಿ 6 ಕೊಠಡಿ, ತ್ಯಾಮಗೊಂಡ್ಲು ಶಾಲೆಗೆ ಖಾಸಗಿ ಕಂಪನಿಯ ನೆರವಿನಿಂದ 10 ಲಕ್ಷ ರೂ.ವೆಚ್ಚದಲ್ಲಿ1 ಶಾಲಾ ಕೊಠಡಿ ಹಾಗೂ ಮಲ್ಲಾಪುರ ಗ್ರಾಮದಲ್ಲಿ ದಾನಿ ಜೋಡಿದಾರ್ ಅವರಿಂದ 6ಲಕ್ಷ ರೂ.ವೆಚ್ಚದಲ್ಲಿ ಶಾಲಾ ರಂಗ ಮಂದಿರ ನಿರ್ಮಾಣ ಖಾಸಗಿ ಕಂಪನಿ ಸಿಎಸ್‌ಆರ್ ಅನುದಾನ ಹಾಗೂ ದಾನಿಗಳ ಸಹಕಾರದಿಂದ 46ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ತಾಲೂಕು ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್

ನೆಲಮಂಗಲ ತಾಲೂಕಿನ 274 ಸರ್ಕಾರಿ ಶಾಲೆಗಳ ಪೈಕಿ 39 ಶಾಲೆಗಳ 189 ಕೊಠಡಿಗಳ ಪೈಕಿ 73 ಕೊಠಡಿಗಳು ದುರಸ್ತಿ ಹಾಗೂ ಶಿಥಿಲವಾಗಿರುವುದು, ಸುಣ್ಣ ಬಣ್ಣದ ಅವಶ್ಯಕತೆ ಬಗ್ಗೆ 2025-26ನೇ ಸಾಲಿಗೆ 1.46 ಕೋಟಿ ರೂ.ಅನುದಾನ ಕಾಮಗಾರಿ ಕುರಿತು ಕ್ರೀಯಾಯೋಜನೆ ಸಿದ್ದ ಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕೆ.ಸಿ.ರಮೇಶ್,ಬಿಇಒ ನೆಲಮಂಗಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net