

ಮಂಡ್ಯ: ಜನರಿಗೆ ಸೇವೆ ಮಾಡುವುದೇ ಶಂಭು ಸೇವಾ ಟ್ರಸ್ಟ್ ಉದ್ದೇಶವಾಗಿದೆ ಎಂದು ಟ್ರಸ್ಟ್ ಹಾಗೂ ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಹೇಳಿದರು.
ನಗರದ ಹೊಸಹಳ್ಳಿಯಲ್ಲಿ ಶುಕ್ರವಾರ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಬ್ಯಾಗ್ ವಿತರಣೆ ಹಾಗೂ ಹೊಸಹಳ್ಳಿಯಿಂದ ಮೂರು ಬಸ್‌ನಲ್ಲಿ ಧರ್ಮಸ್ಥಳಕ್ಕೆ ಹೊರಟ ಶಂಭು ಧರ್ಮಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯ ಜನರು ನನ್ನನ್ನು ಪ್ರೀತಿಯಿಂದ ಬೆಳೆಸಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನಿಂದಾಗುವ ಸೇವೆ ಮಾಡುವ ಇಚ್ಚೆ ಹೊಂದಿದ್ದೇನೆ ಎಂದರು.
ಶಾಲೆಗಳು ದೇವಸ್ಥಾನ ಇದ್ದಂತೆ. ಮಕ್ಕಳು ದೇವರು ಸಮಾನ. ಪ್ರತಿಯೊಬ್ಬರನ್ನು ಸಮಾನವಾಗಿ ಕಾಣುವ ದೃಷ್ಟಿಯಿಂದ ಒಂದನೇ ತರಗತಿಯಿಂದ 10ನೇ ತರಗತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ಉಚಿತವಾಗಿ ಬ್ಯಾಗ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಶಿಕ್ಷಣಕ್ಕಾಗಿ ಸರ್ಕಾರ ಅನೇಕ ಸವಲತ್ತುಗಳನ್ನು ನೀಡುತ್ತಿದೆ. ವಿದ್ಯಾರ್ಥಿಗಳು ಅವುಗಳನ್ನು ಬಳಸಿಕೊಂಡು ಉನ್ನತವಾಗಿ ವ್ಯಾಸಂಗ ಮಾಡುವಂತೆ ಸಲಹೆ ನೀಡಿದ ಅವರು, ಮಂಡ್ಯ ತಾಲೂಕಿನಾದ್ಯಂತ ಶಂಭು ಧರ್ಮ ಯಾತ್ರೆ ಮಾಡಿಸಲಾಗುತ್ತಿದೆ. ಊಟ ಹಾಗೂ ವಸತಿ ಕಲ್ಪಿಸಿ ಮಂಜುನಾಥಸ್ವಾಮಿಯ ದರ್ಶನ ಮಾಡಿಸಿ ವಾಪಸ್ ಕರೆತರಲಾಗುವುದು. ಎಲ್ಲರೂ ಗುಂಪಾಗಿ ಒಟ್ಟಿಗೆ ಸೇರಿ ಶಂಭು ಧರ್ಮ ಯಾತ್ರೆ ಮಾಡಿಸುವುದರಿಂದ ಸಂತೋಷವಾಗುತ್ತದೆ. ಯಾರಿಗೂ ಆತುರ ಮಾಡುವುದು ಬೇಡ, ಎಲ್ಲರಿಗೂ ಧರ್ಮದರ್ಶನ ಮಾಡಿಸಲಾಗುವುದು ಎಂದರು.
ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಮಾಜಿ ಅಧ್ಯಕ್ಷೆ ಕೆ.ಸಿ.ನಾಗಮ್ಮ, ಸದಸ್ಯೆ ಪವಿತ್ರಾ ಬೋರೇಗೌಡ, ಸುರೇಶ್, ಬಾಲರಾಜು, ಕೆಂಚನಹಳ್ಳಿ ಪುಟ್ಟಸ್ವಾಮಿ, ಬಿ.ಆರ್.ಸುರೇಶ್ ಇತರರಿದ್ದರು.