

ಬೇಲೂರು: ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಲು ಶಾಲಾ ವಾರ್ಷಿಕೋತ್ಸವ ಸಹಕಾರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಹೇಳಿದರು.
ತಾಲೂಕಿನ ಹೆಬ್ಬಾಳು ಶಾರದಾ ಕಾನ್ವೆಂಟ್‌ನಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ 2024-25ನೇ ಸಾಲಿನ ಶಾಲಾ ವಾರ್ಷಿಕ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಬಹುತೇಕ ಖಾಸಗಿ ಶಾಲೆಗಳಲ್ಲಿ ವಾರ್ಷಿಕೋತ್ಸವಗಳನ್ನು ವೈಭವದಿಂದ ಆಚರಿಸಲಾಗುತ್ತಿದೆ. ಅದೇ ರೀತಿ ಸರ್ಕಾರಿ ಶಾಲೆಗಳಲ್ಲೂ ಕಡ್ಡಾಯವಾಗಿ ವಾರ್ಷಿಕೋತ್ಸವ ಆಚರಿಸಲು ಮುಂದಾಗಬೇಕು. ದುಡಿಮೆ ಬದುಕಿಗೆ ಅಗತ್ಯ. ಆದರೆ ದುಡಿಮೆಯೇ ಜೀವನವಲ್ಲ. ಇದರ ನಡುವೆ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಪಠ್ಯದ ಜತೆಗೆ ಸಂಸ್ಕಾರಯುತ ಶಿಕ್ಷಣಕ್ಕೆ ಅದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಮಕ್ಕಳ ಸಮ್ಮುಖದಲ್ಲಿಯೇ ಶಿಕ್ಷಕರನ್ನು ಪಾಲಕರು ಟೀಕಿಸಬಾರದು. ಊಟ-ನಿದ್ದೆಗೆಂದೇ ಮೊಬೈಲ್ ನೀಡುವ ಹವ್ಯಾಸಕ್ಕೆ ಬ್ರೇಕ್ ಹಾಕಬೇಕಿದೆ. ಅಲ್ಲದೆ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ಸಲಭವಲ್ಲ. ಆದರೆ ಹೆಬ್ಬಾಳು ಶಾರದಾ ಕಾನ್ವೆಂಟ್ ಉತ್ತಮವಾಗಿದೆ ಎಂದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಂಕ ಗಳಿಕೆಗೆ ಒತ್ತು ನೀಡದೆ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಕಲಿಸುವತ್ತ ಪಾಲಕರು ಮತ್ತು ಶಿಕ್ಷಕರು ಮುಂದಾಗಬೇಕಿದೆ. ವೃತಿಪರ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಮೌಲ್ಯಾಧಾರಿತ ಶಿಕ್ಷಣಕ್ಕೆ ಸರ್ಕಾರ ಮುಂದಾಗಬೇಕಿದೆ. 12ನೇ ಶತಮಾನದಲ್ಲಿದ್ದ ಗುರು-ಶಿಷ್ಯರ ಸಂಬಂಧ ಕಾಣಬೇಕಿದೆ ಎಂದರು.
ಹಗರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಷಣ್ಮುಖ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಟರಾಜ್, ಚನ್ನಬಸವೇಶ್ವರ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಚನ್ನಕೇಶವೇಗೌಡ, ನಿರ್ದೇಶಕರಾದ ವಿನೋದ, ಗ್ರಾಪಂ ಸದಸ್ಯ ಗೋಪಾಲ್. ಮುಖ್ಯ ಶಿಕ್ಷಕ ಶಿವಶಂಕರ್, ಗ್ರಂಥಪಾಲಕ ಮಂಜೇಗೌಡ ತರರಿದ್ದರು.