

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಶಿಕ್ಷಣವು ಕೇವಲ ಅಂಕಗಳಿಗಾಗಿ ಸೀಮಿತವಾಗದೆ, ಶಿಕ್ಷಕರಿಂದ ಉತ್ತಮ ಅಂಶಗಳನ್ನು ತಿಳಿದು, ಶಿಕ್ಷಣ ಸಂಸ್ಥೆಗೆ ಹಾಗೂ ಮಠಕ್ಕೆ ಉತ್ತಮ ಹೆಸರು ಬರಲು ಕಾರಣವಾಗಬೇಕೆಂದು ಮೇಲಣಗವಿ ಮಠದ ಶ್ರೀ ಡಾ. ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಕಂಭಾಳುವಿನ ಶ್ರೀ ವಿಶ್ವಾರಾಧ್ಯ ದೇಶೀಕೇಂದ್ರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ವಿದ್ಯಾರ್ಥಿಗಳು ತಮ್ಮ ಜೀವನ ಸುಗಮಗೊಳಿಸಲು ಶಿಕ್ಷಕರು ಹೇಳಿಕೊಟ್ಟ ವಿಧ್ಯೆ ಕಲಿತು ಆ ಸಂಸ್ಥೆಗೆ ಓಳ್ಳೆಯ ಹೆಸರು ತರಬೇಕು. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನ ಕೊಡದೆ ಮೊಬೈಲ್‌ನಲ್ಲಿ ಅಧಿಕ ಸಮಯ ಕಳೆಯುತ್ತಿದ್ದಾರೆ. ಅವಶ್ಯಕತೆ ಇದ್ದಾಗ ಮಾತ್ರ ಬಳಸಿ, ಓದಿನ ಕಡೆ ಗಮನ ನೀಡಬೇಕು ಎಂದರು.
ಶಿವಗಂಗೆ ಗ್ರಾಪಂ ಅಧ್ಯಕ್ಷ ಕೆ.ಬಿ. ಪ್ರಭುದೇವ ಮಾತನಾಡಿ, ಮಠದ ಆಶ್ರಯದಲ್ಲಿ ನಡೆಯುವ ಶಿಕ್ಷಣ ಸಂಸ್ಥೆಗಳಲ್ಲಿ ಪುಸ್ತಕದ ಶಿಕ್ಷಣ ಕಲಿಯುವುದರ ಜತೆಗೆ ನೈತಿಕ ಶಿಕ್ಷಣವನ್ನೂ ಕಲಿಯಬಹುದಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಅಂಕ ಗಳಿಕೆ ಮುಖ್ಯ ಧ್ಯೇಯವಾಗಿರಬಾರದು. ಸಮಾಜದಲ್ಲಿ ಬದುಕಬೇಕಾದರೆ ನೈತಿಕ ಶಿಕ್ಷಣವೂ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದರ ಅರಿವು ವಿದ್ಯಾರ್ಥಿಗಳಲ್ಲಿ ಮೂಡಬೇಕು ಎಂದರು.