ವಿಶೇಷ ಸಾಧನೆಗೆ ಮಕ್ಕಳನ್ನು ಪ್ರೇರೇಪಿಸಿ

School anniversary
School anniversary
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಪ್ರತಿಯೊಬ್ಬ ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಕಲ್ಪನಾ ಶಕ್ತಿ ಹೆಚ್ಚಿಸಿ ಸ್ಫೂರ್ತಿ ತುಂಬಿದರೆ ಭವಿಷ್ಯದಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ತಿಮ್ಮಯ್ಯ ತಿಳಿಸಿದರು.
ನಗರದ ಸುಭಾಷ್‌ನಗರ ಬಳಿಯ ಗೋಪಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಥಾಮಸ್ ಮೆಮೋರಿಯಲ್ ಆಂಗ್ಲ ಶಾಲೆಯಿಂದ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಜವಾಬ್ದಾರಿ ಪ್ರತಿ ಶಿಕ್ಷಕರು ಹಾಗೂ ಪಾಲಕರ ಮೇಲಿದೆ. ಮಕ್ಕಳು ಶಾಲೆಯಲ್ಲಿ ಶಿಕ್ಷಕರೊಂದಿಗೆ ಅತಿಹೆಚ್ಚು ಸಮಯ ಕಳೆಯಲಿದ್ದು, ಶಿಕ್ಷಕರಿಗೆ ಮಕ್ಕಳ ಬಗ್ಗೆ ತಿಳಿದಿರುವ ಜ್ಞಾನ ಪಾಲಕರಿಗೆ ತಿಳಿಯುವುದಿಲ್ಲ. ಜತೆಗೆ ಪಾಲಕರು ಕೆಲಸದ ಒತ್ತಡದಲ್ಲಿ ಮಕ್ಕಳಿಗೆ ಸಮಯ ನೀಡದ ಕಾರಣ ಹಲವರು ಮಾನಸಿಕ ಖಿನ್ನತೆ ಅನುಭವಿಸುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.
ದೇಶದ ಪ್ರಗತಿಗೆ ಅನುಗುಣವಾದ ವ್ಯಕ್ತಿತ್ವವುಳ್ಳ ನಾಗರಿಕರಾಗಿ ಬೆಳೆಸಬೇಕು. ಮಕ್ಕಳ ಎಲ್ಲ ಜವಾಬ್ದಾರಿಯನ್ನು ಶಾಲಾ ಆಡಳಿತ ಮಂಡಳಿ ಮೇಲೆ ಹೊರಿಸುವುದು ಸಲ್ಲ. ನಿತ್ಯವೂ ಮಕ್ಕಳ ಬಗ್ಗೆ ನಿಗಾವಹಿಸಿ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಬೇಕು ಎಂದರು.
ಇತ್ತೀಚೆಗೆ ಸಾಕಷ್ಟು ವಿದ್ಯಾವಂತರು ಅಪರಾಧ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಆದ್ದರಿಂದ ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಮಾನವೀಯ ಮೌಲ್ಯದ ಜತೆಗೆ ಉತ್ತಮ ಗುಣಗಳನ್ನು ಮೈಗ್ಗೂಡಿಸಬೇಕು. ಗುರಹಿರಿಯರು, ಶಿಕ್ಷಕರು, ಪಾಲಕರ ಬಗ್ಗೆ ಗೌರವದಿಂದ ನಡೆದುಕೊಳ್ಳುವ ಸಂಸ್ಕೃತಿ ಬೆಳೆಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net