

ಹಿರೇಕೆರೂರ: ಪಟ್ಟಣದ ಜಾಲಿಕಟ್ಟಿ ನಗರದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಇದರಿಂದಾಗಿ ಮಕ್ಕಳ ಪ್ರಾಥಮಿಕ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರತೊಡಗಿದೆ.
2006-07ನೇ ಸಾಲಿನಲ್ಲಿ 8ನೇ ವಾರ್ಡ್ ವ್ಯಾಪ್ತಿಯ ಜಾಲಿಕಟ್ಟಿ ನಗರದ ಸಮುದಾಯ ಭವನದಲ್ಲಿ ಆರಂಭಗೊಂಡಿರುವ ಈ ಶಾಲೆ ಮತ್ತು ಅಂಗನವಾಡಿಗೆ ಸ್ವಂತ ಕಟ್ಟಡ ಭಾಗ್ಯ ಇಲ್ಲಿಯವರೆಗೆ ದೊರೆತಿಲ್ಲ. ಸಾಕಷ್ಟು ಸಮಸ್ಯೆಗಳ ಮಧ್ಯೆಯೇ ಒಂದೇ ಕಟ್ಟಡದಲ್ಲಿ ಅಂಗನವಾಡಿ, ಕಿರಿಯ ಪ್ರಾಥಮಿಕ ಶಾಲೆ ನಡೆಸುತ್ತ ಬರಲಾಗುತ್ತಿದೆ.
1ರಿಂದ 5ನೇ ತರಗತಿಯವರೆಗೆ 25 ಮಕ್ಕಳಿವೆ. ಇಬ್ಬರು ಶಿಕ್ಷಕಿಯರಿದ್ದಾರೆ. ಶಾಲೆಯ ಕೊಠಡಿಯಲ್ಲಿ ಅಂಗನವಾಡಿ ಕೇಂದ್ರವಿದ್ದು, ಅಲ್ಲಿ 12 ಸೇರಿದಂತೆ ಒಟ್ಟು 37 ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡಲಾಗುತ್ತಿದೆ. ಜಾಲಿಕಟ್ಟಿ ನಗರ, ಹೌಸಿಂಗ್ ಬೋರ್ಡ್, ಚೌಡೇಶ್ವರಿ ನಗರ, ಕಾಳಿದಾಸ ನಗರ, ವಿಠ್ಠಲ ನಗರದ ಮಕ್ಕಳಿಗೆ ಶಾಲೆ ಅನುಕೂಲಕರವಾಗಿದೆ. ಇಲ್ಲಿ ಬಹುತೇಕ ಕೂಲಿಕಾರರು ಮತ್ತು ಹಮಾಲಿಗಳ ವಸತಿಗಳಿದ್ದು, ಅವರ ಮಕ್ಕಳಿಗೆ ಈ ಶಾಲೆ ಮತ್ತು ಅಂಗನವಾಡಿ ಕೇಂದ್ರ ಅವಶ್ಯವಾಗಿದೆ.
ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಮತ್ತು ಸುತ್ತಲೂ ಕಾಂಪೌಂಡ್ ಇಲ್ಲ. ಅಡುಗೆ ಸಾಮಗ್ರಿ ಸಂಗ್ರಹ, ಬಿಸಿಯೂಟ ತಯಾರಿಕೆ, ಮುಖ್ಯ ಶಿಕ್ಷಕರ ಕಚೇರಿ ಹೀಗೆ ಎಲ್ಲವೂ ಒಂದೇ ಕೊಠಡಿಯಲ್ಲಿ ನಡೆಯಬೇಕು. ಕಟ್ಟಡದ ಮೇಲ್ಛಾವಣಿಯಲ್ಲಿ ಬಿರುಕು ಕಾಣಿಸುತ್ತಿದೆ. ಜಾಲಿಕಟ್ಟಿ ನಗರವನ್ನು ಪಟ್ಟಣ ಪಂಚಾಯಿತಿ ಕೊಳಚೆ ಪ್ರದೇಶವೆಂದು ಗುರುತಿಸಿದೆ. ಭವನದ ಪಕ್ಕದಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಿಸಲಾಗಿದೆ. ಶೌಚಗೃಹದ ಸೇಫ್ಟಿಟ್ಯಾಂಕ್ ಕಟ್ಟಿ ಗಬ್ಬೆದ್ದು ನಾರುತ್ತಿದ್ದು, ಇದು ಮತ್ತಷ್ಟು ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರತೊಡಗಿದೆ. ಟ್ಯಾಂಕ್ ಸ್ವಚ್ಛಗೊಳಿಸಲು ಗುಂಡಿಯ ಮೇಲಿನ ಕಲ್ಲು ತೆಗೆದಿರಿಸಿದ್ದು, ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
ಶಾಲೆ ಹಾಗೂ ಮಕ್ಕಳ ಸಮಸ್ಯೆ ಕುರಿತು ಸಾಕಷ್ಟು ಬಾರಿ ಪಪಂ ಮತ್ತು ಶಿಕ್ಷಣ ಇಲಾಖೆ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ದೂರುತ್ತಿದ್ದಾರೆ.
ಕಟ್ಟಡದ ಅವ್ಯವಸ್ಥೆ ಮತ್ತು ಮೂಲಸೌಕರ್ಯ ಕೊರತೆ ಬಗ್ಗೆ ಶಿಕ್ಷಣ ಇಲಾಖೆ ಮತ್ತು ಪಪಂಗೆ ತಿಳಿಸಲಾಗಿದೆ. ಶಾಲೆಗೆ ಪಪಂ ಹತ್ತಿರದಲ್ಲಿ ಸ್ಥಳ ನೀಡುತ್ತಿಲ್ಲ. ಶಿಕ್ಷಣ ಇಲಾಖೆ ಕೇಳಿದರೆ ಸ್ಥಳವಾಗಲೀ, ಈ ಭವನವಾಗಲೀ ಇಲ್ಲಿಯವರೆಗೆ ನಮಗೆ ಹಸ್ತಾಂತರವಾಗಿಲ್ಲ ಎಂಬ ಕಾರಣ ಹೇಳಲಾಗುತ್ತಿದೆ. ಕೂಡಲೇ ಈ ಎಲ್ಲ ಸಮಸ್ಯೆ ಬಗೆಹರಿಸಬೇಕು. ರಮೇಶ ಕೋಡಿಹಳ್ಳಿ, 8ನೇ ವಾರ್ಡ್ ಸದಸ್ಯ ಪಪಂಗೆ ಹಲವಾರು ಬಾರಿ ಕಟ್ಟಡ ಮತ್ತು ಸ್ಥಳವನ್ನು ನಮ್ಮ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಮನವಿ ಮಾಡಲಾಗಿದೆ. ಹಸ್ತಾಂತರವಾದರೆ ಶಾಲೆಗೆ ಮೂಲಸೌಕರ್ಯ ಒದಗಿಸಬಹುದಾಗಿದೆ. ಎನ್. ಶ್ರೀಧರ, ಕ್ಷೇತ್ರ ಶಿಕ್ಷಣಾಧಿಕಾರಿ