ಕೆಆರ್​ಐಡಿಎಲ್​ನಿಂದ ಶಾಲೆ ದತ್ತು: ನಿಗಮದ ಅಧ್ಯಕ್ಷ ರುದ್ರೇಶ್ ಮಾಹಿತಿ

17-12-rama-Bjp
Published on

ರಾಮನಗರ: ನಿಗಮದಿಂದ ಜಿಲ್ಲೆಯ 3 ಸರ್ಕಾರಿ ಶಾಲೆಗಳು ಸೇರಿ 8 ಶಾಲೆಗಳನ್ನು ದತ್ತು ತೆಗೆದುಕೊಂಡು ಹೈಟೆಕ್ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲು ಚಿಂತಿಸಲಾಗಿದೆ ಎಂದು ಕೆಆರ್​ಐಡಿಎಲ್ ಅಧ್ಯಕ್ಷ ಎಂ. ರುದ್ರೇಶ್ ತಿಳಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಮನಗರ ಜಿಲ್ಲೆಯ ಮರಳವಾಡಿ ಹೋಬಳಿಯ ಅಣ್ಣೇದೊಡ್ಡಿ, ತೇರು ಬೀದಿ ಗ್ರಾಮದ ತಲಾ ಒಂದು ಸರ್ಕಾರಿ ಶಾಲೆ, ಕಸಬಾ ಅಥವಾ ಕೈಲಾಂಚ ಹೋಬಳಿಯ ಒಂದು ಶಾಲೆ, ಚಾಮರಾಜನಗರ ಜಿಲ್ಲೆಯ ನಾಲ್ಕು ಸರ್ಕಾರಿ ಶಾಲೆಗಳು ಹಾಗೂ ಶಿವಮೊಗ್ಗ ಜಿಲ್ಲೆಯ ಒಂದು ಶಾಲೆಯನ್ನು ದತ್ತು ತೆಗೆದುಕೊಳ್ಳಲಾಗುತ್ತಿದ್ದು, ಮುಂದಿನ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಗುವುದು. ಈ ಶಾಲೆಗಳ ಅಭಿವೃದ್ಧಿ ಜತೆಗೆ, ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಲ್ಯಾಪ್​ಟಾಪ್ ಇಲ್ಲವೇ ಐಪಾಡ್ ಕೊಡಿಸಲಾಗುವುದು ಎಂದರು.

ಇತಿಮಿತಿಯೊಳಗೆ ಜಿಲ್ಲೆಯ ಅಭಿವೃದ್ಧಿಗೆ ಒತ್ತು: ಜಿಲ್ಲೆಯ ಗ್ರಾಮೀಣ ಭಾಗದ ಅಭಿವೃದ್ಧಿಗೆ ಇತಿಮಿತಿಯೊಳಗೆ ಜಿಲ್ಲೆಯ ಕೆರೆಗಳು, ರಸ್ತೆ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು. ಇದರ ಜತೆಗೆ ಅರ್ಕಾವತಿ ನದಿ ಪುನಶ್ಚೇತನ ಸಹ ಅಗತ್ಯವಾಗಿ ಆಗಬೇಕಿದ್ದು, ಇಲಾಖೆಯಲ್ಲಿ ಅರ್ಕಾವತಿ ನದಿ ಪುನಶ್ಚೇತನಕ್ಕೆ ಅವಕಾಶವಿದ್ದರೆ ಅನುದಾನ ನೀಡಲಾಗುವುದು ಎಂದು ರುದ್ರೇಶ್ ತಿಳಿಸಿದರು.

ಈಗಾಗಲೇ ರಾಮನಗರ ನಗರ ಪ್ರದೇಶದ ಕೊಳಚೆ ನೀರು ಅರ್ಕಾವತಿ ನದಿ ಸೇರದಂತೆ ತಡೆಯಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ 21 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇದಕ್ಕೆ ಮಂಡಳಿ ಅಧ್ಯಕ್ಷರಾದ ರಾಜೂಗೌಡ ನೆರವು ನೀಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೆಂಗೇರಿ ನರಸಿಂಹಯ್ಯ, ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ವರದರಾಜುಗೌಡ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಮುರಳೀಧರ್, ಕನಕಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್, ಮುಖಂಡರಾದ ಎಸ್.ಆರ್.ನಾಗರಾಜು, ಪದ್ಮನಾಭ್, ನರೇಂದ್ರ ಮುಂತಾದವರು ಇದ್ದರು.

ಈ ಬಾರಿ ಬಿಜೆಪಿಗೆ ಹೆಚ್ಚಿನ ಸ್ಥಾನ

ಈ ಬಾರಿ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದ್ದಾರೆ. ಈ ಸಂಬಂಧ ಕಸಬಾ ಮತ್ತು ಕೈಲಾಂಚ ಹೋಬಳಿಯ ಮುಖಂಡರೊಂದಿಗೆ ಮಾತನಾಡಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಈಗಾಗಲೇ ಸ್ಪರ್ಧೆ ಮಾಡಿದ್ದಾರೆ. ಗೆಲುವು ನಿಶ್ಚಿತವಾಗಿದ್ದು, ಒಂದಷ್ಟು ಗ್ರಾಮ ಪಂಚಾಯಿತಿಗಳು ನಮ್ಮ ತೆಕ್ಕೆಗೆ ಬರಲಿವೆ ಎಂದು ರುದ್ರೇಶ್ ವಿಶ್ವಾಸ ವ್ಯಕ್ತಪಡಿಸಿದರು.

ನಾನು ಕೆಆರ್​ಐಡಿಎಲ್ ಅಧ್ಯಕ್ಷನಾಗಲು ರಾಮನಗರ ಜಿಲ್ಲೆಯ ಜನತೆ ನೀಡಿದ ಬೆಂಬಲ ಕಾರಣ. ಈ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಗುರಿ ಹೊಂದಲಾಗಿದೆ. ರಾಮನಗರ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಲು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. | ಎಂ. ರುದ್ರೇಶ್ ಕೆಆರ್​ಐಡಿಎಲ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net