

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿಯ ಕೋಟೆಬೀದಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಬಳಿ ಆ.25ರಂದು ಶಾಲಾ ಕಟ್ಟಡದ ಸಜ್ಜಾ ಕುಸಿದು ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದ ಪ್ರಕರಣ ಸಂಬಂಧ ಕಟ್ಟಡದ ಫಿಟ್‌ನೆಸ್ ವರದಿಗಾಗಿ ಜಿಲ್ಲಾಡಳಿತ ಎದುರು ನೋಡುತ್ತಿದೆ. ವರದಿ ಬಳಿಕ ಮುಂದಿನ ಕ್ರಮಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿ ಬಳಿಕ ಕಟ್ಟಡದ ಗುಣಮಟ್ಟದ ಬಗ್ಗೆ ತಿಳಿಯಲಾಗುವುದು ಕಟ್ಟಡ ಯೋಗ್ಯವೆನಿಸಿದರೆ ತರಗತಿ ಮುಂದುವರೆಸುವುದು ಇಲ್ಲವಾದರೆ ಮಕ್ಕಳನ್ನು ಬೇರೆ ಕಡೆ ಸ್ಥಳಾಂತರಿಸಿ ಕಟ್ಟಡ ನೆಲಸಮಗೊಳಿಸುವ ಜತೆಗೆ ಕಳಪೆ ಕಾಮಗಾರಿ ಬಗ್ಗೆ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮಜರುಗಿಸಲು ಹಿರಿಯ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಇಂದು ಮಕ್ಕಳಿಬ್ಬರು ಬಿಡುಗಡೆ ಸಾಧ್ಯತೆ: ಶಾಲಾ ಕಟ್ಟಡದ ಸಜ್ಜಾ ಕುಸಿದು ಮೂವರು ಮಕ್ಕಳು ಗಾಯಗೊಂಡ ಪ್ರಕರಣದಲ್ಲಿ ಈಗಾಗಲೇ ಒಬ್ಬ ಬಾಲಕ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ, ಮತ್ತಿಬ್ಬರು ಬಾಲಕರಲ್ಲಿ ಒಬ್ಬ ವಿಕ್ಟೋರಿಯಾದಲ್ಲಿ ಮತ್ತೊಬ್ಬ ಹಾಸ್ಮಾಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಗುಣಮುಖರಾಗಿದ್ದು ಮಂಗಳವಾರ ಅಥವಾ ಬುಧವಾರ ಮನೆಗೆ ಮರಳಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ? ದೇವನಹಳ್ಳಿಯ ಕೋಟೆಬೀದಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಬಳಿ ಆ.25ರಂದು ಶಾಲಾ ಕಟ್ಟಡದ ಸಜ್ಜಾ ಕುಸಿದು ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಭುವನ್ (7), ದರ್ಶನ್ (14) ಕುಮಾರ್ (15 )ಗಂಭೀರ ಗಾಯಗೊಂಡಿದ್ದು ಅದೃಷ್ಟವಶಾತ್ ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದರು. ಮಧ್ಯಾಹ್ನ 1.30 ರ ವೇಳೆ ಅವಘಡ ಸಂಭವಿಸಿದೆ. ಮಧ್ಯಾಹ್ನ ಗಾಯಗೊಂಡ ಬಾಲಕರು ಸೇರಿ ಇನ್ನು ಹಲವು ವಿದ್ಯಾರ್ಥಿಗಳು ಆಟವಾಡುತ್ತಿದ್ದರು. ಈ ವೇಳೆ ಚೆಂಡು ಸಜ್ಜಾ ಮೇಲೆ ಬಿದ್ದಿತ್ತು. ಒಬ್ಬ ಬಾಲಕ ಚೆಂಡು ತರಲು ಶಾಲಾ ಕಟ್ಟಡ ಹತ್ತಿ ಸಜ್ಜಾ ಮೇಲೆ ಇಳಿದಿದ್ದ ತಕ್ಷಣವೇ ಸಜ್ಜಾ ಕುಸಿದು ಬಿದ್ದಿದೆ. ಸಜ್ಜಾದಿಂದ ಕೆಳಗೆ ಬಿದ್ದ ಬಾಲಕ ಸೇರಿ ಕೆಳಗಡೆ ನಿಂತಿದ್ದ ಇನ್ನಿಬ್ಬರು ಬಾಲಕರಿಗೆ ತೀವ್ರತರವಾದ ಪೆಟ್ಟು ಬಿದ್ದಿತ್ತು.
ಸಿಎಸ್‌ಆರ್ ಅನುದಾನದಡಿ ಕಟ್ಟಡ: 2016ರಲ್ಲಿ ಸಿಎಸ್‌ಆರ್ ಅನುದಾಡಿ ಶಾಲಾ ಕಟ್ಟಡ ನಿರ್ಮಾಣವಾಗಿದ್ದು, ಕಟ್ಟಡ ನಿರ್ಮಾಣವಾದ ಕೇವಲ 9 ವರ್ಷದಲ್ಲೇ ಸಜ್ಜಾ ಕುಸಿದಿರುವುದು ಶಾಲಾ ಕಟ್ಟಡ ಕಾಮಗಾರಿ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕಟ್ಟಡ ಕಳಪೆ ಕಾಮಗಾರಿಯಿಂದ ಕೂಡಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಕಟ್ಟಡ ಸುರಕ್ಷತೆ ಬಗ್ಗೆ ವರದಿ ನೀಡುವಂತೆ ಇಂಜಿನಿಯರ್‌ಗಳಿಗೆ ಪತ್ರ ಬರೆಯಲಾಗಿದೆ. ಕ್ಯಾಲಿಟಿ ಪರೀಕ್ಷೆ ಬಳಿಕ ದೊರೆಯುವ ಆಧಾರದ ಮೇಲೆ ಸಿಎಸ್‌ಆರ್ ಅನುದಾನದಡಿ ನಿರ್ಮಾಣವಾಗಿರುವ ಈ ಕಟ್ಟಡದ ವಸ್ತುಸ್ಥಿತಿ ತಿಳಿದುಬರಲಿದೆ.
ಅವಘಡದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ, ಸಜ್ಜಾ ಕುಸಿದು ಅವಘಡ ಸಂಭವಿಸಿದ್ದು, ಕಟ್ಟಡದ ಫಿಟ್‌ನೆಸ್ ಬಗ್ಗೆ ವರದಿ ತರಿಸಿಕೊಳ್ಳುತ್ತಿದ್ದೇವೆ. ಸಿಎಸ್‌ಆರ್ ಅನುದಾನದಡಿ ಶಾಲಾ ಕಟ್ಟಡ ನಿರ್ಮಾಣವಾಗಿದ್ದು ಪ್ರಕರಣ ತನಿಖೆ ನಡೆಸಲಾಗುತ್ತಿದೆ. ವರದಿ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು.
ಡಾ.ಕೆ.ಎನ್.ಅನುರಾಧಾ, ಜಿಪಂ ಸಿಇಒ
ಗಾಯಗೊಂಡ ಮೂವರು ಮಕ್ಕಳ ಪೈಕಿ ಒಬ್ಬ ಬಾಲಕನನ್ನು ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕಳುಹಿಸಿಕೊಡಲಾಗಿದೆ, ಇನ್ನಿಬ್ಬರು ಬಾಲಕರು ಚೇತರಿಸಿಕೊಂಡಿದ್ದು ಬುಧವಾರ ಮನೆಗೆ ಮರಳುವ ಸಾಧ್ಯತೆ ಇದೆ. ಶಾಲಾ ಕಟ್ಟಡದ ಸಜ್ಜಾ ಕುಸಿದಿರುವುದರಿಂದ ಕಟ್ಟಡದ ಸುರಕ್ಷತೆಯ ಬಗ್ಗೆ ವರದಿ ನೀಡುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ಲಲಿತಮ್ಮ, ಬಿಇಒ ದೇವನಹಳ್ಳಿ
ಸಿಎಸ್‌ಆರ್ ಅನುದಾನದಲ್ಲಿ ನಿರ್ಮಿಸಿರುವ ಈ ಶಾಲಾ ಕಟ್ಟಡದ ಕಾಮಗಾರಿ ಕಳಪೆಯಾಗಿದೆ, ಶಾಲೆಯ ಗೋಡೆಗೆ ಮತ್ತು ಸಜ್ಜಾಗೆ ಯಾವುದೇ ರೀತಿ ಲಿಂಕ್ ಇಲ್ಲದೆ ಕಟ್ಟಿದ್ದಾರೆ, ಕಂಬಿ ಕಟ್ಟದೆ ಸುಮ್ಮನೆ ಎರಡು ಇಂಚು ಇಟ್ಟಿಗೆ ಸಿಮೆಂಟ್ ಹಾಕಿ ಬಿಟ್ಟಿದ್ದಾರೆ, ಇದು ಹೆಚ್ಚಿನ ದಿನಗಳು ನಿಲ್ಲುವುದಿಲ್ಲ, ಆದರೆ ಇಷ್ಟು ವರ್ಷ ಹೇಗೆ ತಡೆದಿತ್ತು ಎನ್ನುವುದು ಆಶ್ಚರ್ಯ.
ನಾಗಣ್ಣಗೌಡ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ