

ಕುಶಾಲನಗರ:
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು ಗ್ರಾಮ ಕಲ್ಯಾಣ, ಹಿಂದೂ ರುದ್ರಭೂಮಿಗಳ ಅಭಿವೃದ್ಧಿ ಯೋಜನೆಗಳಿಗೆ ಧನಸಹಾಯ, ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಶಾಲೆಗಳಿಗೆ ಬೆಂಚುಗಳ ವಿತರಣೆ, ಮತ್ತು ಹಾಲು ಉತ್ಪಾದಕ ಸಂಘದ ಕಟ್ಟಡಗಳ ರಚನಾ ಕಾರ್ಯದಲ್ಲಿ ಹಣಕಾಸು ನೆರವು ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದು ಸಂಘದ ಪ್ರತಿನಿಧಿ ರೋಹಿತ್ ಹೇಳಿದರು. ಶುಕ್ರವಾರ ಇಲ್ಲಿನ ಜ್ಞಾನಭಾರತಿ ಶಾಲೆಯಲ್ಲಿ ಆಯೋಜಿಸಿದ್ದ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಶಾಲೆಗಳಿಗೆ ಡೆಸ್ಕ್, ಬೆಂಚ್ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ ವಲಯದಿಂದ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಬೇಡಿಕೆಗೆ ಅನುಗುಣವಾಗಿ ಸುಮಾರು 210 ಡೆಸ್ಕ್, ಬೆಂಚುಗಳನ್ನು 8 ಸರ್ಕಾರಿ ಮತ್ತು ಖಾಸಗಿ ಅನುದಾನಿತ ಶಾಲೆಗಳಿಗೆ ನೀಡಲಾಗಿದೆ. ಕಳೆದ ಸಾಲಿನಲ್ಲಿ ಗ್ರಾಮ ಕಲ್ಯಾಣ, ಹಿಂದು ರುದ್ರಭೂಮಿಗಳಿಗೆ ಆರ್ಥಿಕ ನೆರವು, ಜ್ಞಾನದೀಪ ಯೋಜನೆ ಅಭಿವೃದ್ಧಿ, ಹಾಲು ಉತ್ಪಾದಕ ಸಂಘದ ಕಟ್ಟಡಗಳ ರಚನೆಗೆ ಸಹಾಯಧನ ಸೇರಿದಂತೆ ಸುಮಾರು 15 ಲಕ್ಷ ರೂಪಾಯಿಗಳನ್ನು ಸಾರ್ವಜನಿಕ ವಲಯಕ್ಕೆ ನೀಡಲಾಗಿದೆ. ಕೊಡಗು, ಹಾಸನ ಮತ್ತು ಮೈಸೂರು ಜಿಲ್ಲೆಗಳ ಕೆಲವು ಶಾಲೆಗಳಿಗೆ ಒಟ್ಟಾರೆ 828 ಡೆಸ್ಕ್ ಬೆಂಚುಗಳನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಸಮಾಜದಲ್ಲಿ ಇನ್ನೊಬ್ಬರ ನೋವಿಗೆ ಸ್ಪಂದಿಸುವ ನಾಡಿ ಮಿಡಿತವನ್ನು ಅರಿಯುವ, ತಮ್ಮ ಆದಾಯದ ಸ್ವಲ್ಪ ಭಾಗವನ್ನು ಸಮಾಜಕ್ಕಾಗಿ ಸಮರ್ಪಿಸುವ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಾಡುತ್ತಿರುವುದು ಪ್ರಶಂಸನೀಯ ಎಂದರು.
ಜ್ಞಾನಭಾರತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಪುಂಡರೀಕಾಕ್ಷ ಮಾತನಾಡಿ, ಶಾಲೆಗಳ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹತ್ವದ ಹೆಜ್ಜೆಗಳ ನೀಡುತ್ತಿದೆ. ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಪೀಠೋಪಕರಣಗಳನ್ನು ಒದಗಿಸಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಜ್ಞಾನಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಜಿ.ಎಲ್. ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ , ಪಂಚಾಯಿತಿ ಸದಸ್ಯೆ ಜಯಲಕ್ಷ್ಮಿ ನಂಜುAಡಸ್ವಾಮಿ, ಸಂಸ್ಥೆಯ ನಿರ್ದೇಶಕರಾದ ಪಿ.ಪಿ. ಸತ್ಯನಾರಾಯಣ, ಅಶೋಕ್ ಕುಮಾರ್, ರಾಜೇಂದ್ರ ಭಾಗವಹಿಸಿದ್ದರು.