ಸರ್ಕಾರಿ ಶಾಲೆಗಳಲ್ಲೇ ಇಂಗ್ಲಿಷ್ ಬೋಧನೆ ; ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ 50 ಶಾಲೆಗಳಲ್ಲಿ ಜಾರಿ, ಮೊದಲು ಬಂದವರಿಗೆ ಆದ್ಯತೆ

MADUGIRI DDPI Office
Published on

ಮಧುಗಿರಿ : ಇನ್ಮುಂದೆ ಬಡ ಮಕ್ಕಳ ಇಂಗ್ಲಿಷ್  ಕಲಿಕೆ ಕನಸು ನನಸಾಗಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಿಲ್ಲೆಯ 41 ಕನ್ನಡ ಮಾಧ್ಯಮ ಮತ್ತು 9 ಉರ್ದು ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಎಲ್ಲೆಲ್ಲಿ ಆರಂಭ ?: ತುಮಕೂರು ಶೈಕ್ಷಣಿಕ ಜಿಲ್ಲೆಯ ತಿಪಟೂರು ತಾಲೂಕಿನ ಗಂಗನಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ತುಮಕೂರು ತಾಲೂಕಿನಲ್ಲಿ ನಗರದ 2 ವಾರ್ಡ್ ಮತ್ತು 13ನೇ ವಾರ್ಡಿನ ಮೇಲುಕೋಟೆ, ಉತ್ತರ ಬಡಾವಣೆ, ಗ್ರಾಮಾಂತರ ಭಾಗದ ಊರ್ಡಿಗೆರೆ, ಕೆಸ್ತೂರು, ಕಾಟೇನಹಳ್ಳಿ, ಸಿರಿವರ, ಹೊನ್ನುಡಿಕೆ, ಗೂಳರಿವೆ, ಬುಗುಡನಹಳ್ಳಿ, ತುರುವೇಕೆರೆ ತಾಲೂಕಿನ ದಬ್ಬೇಘಟ್ಟ, ಬಾಣಸಂದ್ರ, ಎಚ್.ಗೊಲ್ಲರಹಟ್ಟಿ, ದೊಡ್ಡಗೊಲ್ಲರಹಟ್ಟಿ, ಸಂಪಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಗಳಲ್ಲಿ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಕೊರಟಗೆರೆ ತಾಲೂಕು ಜಿಎಚ್‌ಪಿಎಸ್ ಬಾಲಕಿಯರ ಪಾಠಶಾಲೆ, ಅರಸಾಪುರ, ಕೋಳಾಲ, ಮಣವಿನ ಕುರ‌್ಕೆ, ಬುಕ್ಕಾಪಟ್ಟಣ, ತುಂಬಾಡಿ ಮತ್ತು ಪಟ್ಟಣದ ಗೌರಿನಿಲಯ ಕಿರಿಯ ಪ್ರಾಥಮಿಕ ಪಾಠಶಾಲೆ, ಮಧುಗಿರಿ ತಾಲೂಕಿನ ಬಡವನಹಳ್ಳಿ, ಯಾಕಾರ‌್ಲಹಳ್ಳಿ, ಬ್ಯಾಲ್ಯ, ಕೊಡಿಗೇನಹಳ್ಳಿಯ ಬಾಲಕಿಯರ ಪ್ರಾಥಮಿಕ ಪಾಠಶಾಲೆ, ಸಜ್ಜೆಹೊಸಹಳ್ಳಿ, ದಬ್ಬೇಘಟ್ಟ ಮತ್ತು ಪಟ್ಟಣದ ಹಿರಿಯ ಬಾಲಕರ ಪ್ರಾಥಮಿಕ ಪಾಠಶಾಲೆ, ಪಾವಗಡ ತಾಲೂಕಿನ ರೊಪ್ಪ, ಐ.ಎನ್.ಹೊಸಕೋಟೆಯ ಬಾಲಕರ ಪಾಠಶಾಲೆ, ಪೊನ್ನಸಮುದ್ರ, ಬಿ.ಹೊಸಹಳ್ಳಿ, ಅರಸೀಕೆರೆ ಮತ್ತು ಶಿರಾ ತಾಲೂಕಿನ ಕಳ್ಳಂಬೆಳ್ಳ ಎನ್.ಎಚ್-4, ಸೀಗಲಹಳ್ಳಿ, ತಾವರೆಕೆರೆ, ದೊಡ್ಡಬಾಣಗೆರೆ, ದೇವನಹಳ್ಳಿ ಮತ್ತು ನಗರದ ಸರ್ಕಾರಿ ಕೋಟೆ ಪ್ರಾಥಮಿಕ ಪಾಠಶಾಲೆಗಳಲ್ಲಿ 1 ನೇ ತರಗತಿಯಿಂದ ಆಂಗ್ಲ ಮಾಧ್ಯಮ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ.

ಶಾಲೆಗಳಲ್ಲಿ ಹೇಗಿದೆ ಸಿದ್ಧತೆ : ಆರಂಭದಲ್ಲಿ ಪ್ರತಿ ಶಾಲೆಯಲ್ಲಿ 30 ವಿದ್ಯಾರ್ಥಿಗಳಿಗೆ ಅವಕಾಶವಿದ್ದು, ಮೊದಲು ಬಂದವರಿಗೆ ಆದ್ಯತೆ ಮೇರೆಗೆ ದಾಖಲಾತಿ ಮಾಡಿಕೊಳ್ಳಲಾಗುತ್ತದೆ. ಈ ಶಾಲೆಗಳ ಯಶಸ್ಸನ್ನು ಆಧರಿಸಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡಲಾಗುವುದು. ಆಯಾ ಶಾಲೆಯ ಶಿಕ್ಷಕರನ್ನೇ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಕಲಿಕೆಗೆ ತರಬೇತಿ, ಬೋಧನಾ ವಿಧಾನ ಮತ್ತು ಮೌಲ್ಯಮಾಪನದಲ್ಲಿ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ.

ಹೇಗಿರಲಿದೆ ಕಲಿಕಾ ವಿಧಾನ : ಕನ್ನಡ ಭಾಷೆಯ ಪಠ್ಯ ವಿಷಯಗಳೇ ಇಲ್ಲೂ ಇರಲಿದ್ದು, ಕಲಿಕೆಯ ವಿಷಯ ಆಂಗ್ಲ ಮಾಧ್ಯಮದಲ್ಲಿರುತ್ತದೆ. ಶಿಕ್ಷಣದಲ್ಲಿ ಮಕ್ಕಳ ಕಲಿಕೆಗೆ ಪ್ರೋತ್ಸಾಹ, ವಿಭಿನ್ನ ಕಲಿಕಾ ವಿಧಾನ, ನಲಿ-ಕಲಿ ಕಲಿಕಾ ವಿಧಾನ, ಸ್ವಂತ ಸಾಮರ್ಥ್ಯದಿಂದ ಕಲಿಯುವ ವಾತಾವರಣ, ಭಯಮುಕ್ತ ವಾತಾವರಣ, ಬರವಣಿಗೆಗೆ ಪ್ರೋತ್ಸಾಹ, ವಿಡಿಯೋ ತರಗತಿಗಳ ಅನಾವರಣ, ಮಗು ಕಲಿಯುವ ಹಂತದಲ್ಲಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಕಾರ್ಯಗಳ ಮೂಲಕ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪುಸ್ತಕ, ಸಮವಸ ಮತ್ತು ಕಲಿಕಾ ಸಾಮಗ್ರಿಗಳನ್ನು ಸರ್ಕಾರವೇ ನೀಡಲಿದೆ.

ಶೈಕ್ಷಣಿಕ ಜಿಲ್ಲೆಯಲ್ಲಿ ಆಯ್ದ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ಕಲಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಎಲ್ಲ ಭಾಗಗಳಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಜೂಮ್ ಮೀಟ್ ಮೂಲಕ ಶಿಕ್ಷಕರಿಗೆ ಆಂಗ್ಲ ಬೋಧನೆಗೆ ತರಬೇತಿ ನೀಡಲಾಗಿದೆ. ಎಂ.ರೇವಣಸಿದ್ದಪ್ಪ, ಡಿಡಿಪಿಐ, ಮಧುಗಿರಿ ಶೈಕ್ಷಣಿಕ ಜಿಲ್ಲೆ 2021-22ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಬೋಧನೆಗೆ ಸರ್ಕಾರ ಅವಕಾಶ ನೀಡಿದ್ದು, ಇದೊಂದು ಉತ್ತಮ ಕಾರ್ಯಕ್ರಮ. ಇದರಿಂದ ಬಡ ಮಕ್ಕಳಿಗೆ ಬಹಳಷ್ಟು ಅನುಕೂಲವಾಗಲಿದೆ. ಸಿ.ನಂಜಯ್ಯ, ಡಿಡಿಪಿಐ ತುಮಕೂರು ಶೈಕ್ಷಣಿಕ ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net