ವಸತಿ ಶಾಲೆಗಳು ಮಕ್ಕಳಿಗೆ ಎಷ್ಟು ಸೇಫ್?

school
Published on

ಮಡಿಕೇರಿ

ಮಡಿಕೇರಿ ತಾಲೂಕು ಕಾಟಕೇರಿಯಲ್ಲಿನ ಖಾಸಗಿ ವಸತಿ ಶಾಲೆಯಲ್ಲಿ ಕಳೆದ ಗುರುವಾರ (ಅ.9)ಮುಂಜಾನೆ ಸಂಭವಿಸಿದ ಅಗ್ನಿ ದುರಂತ ಮತ್ತು ಇದರಿಂದ ಓರ್ವ ವಿದ್ಯಾರ್ಥಿ ಮೃತಪಟ್ಟ ಪ್ರಕರಣ ಜಿಲ್ಲೆಯಾದ್ಯಂತ ದಿಗ್ಭçಮೆ ಮೂಡಿಸಿತ್ತು. ಜತೆಗೆ ವಸತಿ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಹಲವು ಪ್ರಶ್ನೆಗಳನ್ನೂ ಎತ್ತಿದ್ದವು. ದುರ್ಘಟನೆ ನಡೆದ ಖಾಸಗಿ ವಸತಿ ಶಾಲೆ ಕಾನೂನು ಬದ್ಧವಾಗಿ ನಡೆಯುತ್ತಿತ್ತೇ ಎನ್ನುವ ಪ್ರಶ್ನೆ ಒಂದೆಡೆಯಾದರೆ, ಒಂದು ವೇಳೆ ದಾಖಲಾತಿಗಳು ಸರಿ ಇಲ್ಲದಿದ್ದರೆ ಇಷ್ಟು ವರ್ಷಗಳ ಕಾಲ ಇಲ್ಲಿ ವಸತಿ ಶಾಲೆಗೆ ಹೇಗೆ ಅವಕಾಶ ಮಾಡಿಕೊಡಲಾಗಿತ್ತು ? ಎನ್ನುವ ಪ್ರಶ್ನೆಯೂ ಜನಸಾಮಾನ್ಯರನ್ನು ಕಾಡುತ್ತಿದೆ.

ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ ನಡೆಯುತ್ತಿರುವ ಮತ್ತು ಖಾಸಗಿಯವರ ಇತರ ವಸತಿ ಶಾಲೆಗಳೂ ಇವೆ. ಕಾಟಕೇರಿ ಶಾಲಾ ದುರಂತದ ನಂತರ ಬೇರೆ ವಸತಿ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಶಾಲೆ ಮತ್ತು ಅಲ್ಲಿಯ ಸಿಬ್ಬಂದಿ ಮೇಲೆ ನಂಬಿಕೆಯಿAದ ತಮ್ಮ ಮಕ್ಕಳನ್ನು ಅಲ್ಲಿ ಬಿಟ್ಟಿರುವ ಪೋಷಕರಲ್ಲೂ ಆತಂಕ ಮನೆ ಮಾಡಿದೆ. ಈ ದುರ್ಘಟನೆ ವಸತಿ ಶಾಲೆಗಳಲ್ಲಿ ಸುರಕ್ಷತೆಗೆ ಆದ್ಯತೆ ಕೊಡಬೇಕಾದ ಅಗತ್ಯತೆಯನ್ನು ಒತ್ತಿ ಹೇಳಿದೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ಹಂಚಿಕೊAಡಿದ್ದಾರೆ.

ವಸತಿ ಶಾಲೆಗಳಲ್ಲಿ ಮಕ್ಕಳ ಜೀವಕ್ಕೆ ಹಾನಿಯಾದರೆ ಕ್ಷಮಿಸಲು ಸಾಧ್ಯವಿಲ್ಲ. ಹಣದ ಆಸೆಗೆ ಸುಳ್ಳು ಹೇಳಿ ವಿದ್ಯಾಸಂಸ್ಥೆಗಳು ಮಕ್ಕಳನ್ನು ದಾಖಲು ಮಾಡಿಕೊಳ್ಳಬಾರದು. ಮಕ್ಕಳ ಜೀವವನ್ನು ಯಾರಿಂದಲೂ ತಂದು ಕೊಡಲು ಸಾಧ್ಯವಿಲ್ಲ. ವಸತಿ ಶಾಲೆಗಳು ಸುಸಜ್ಜಿತವಾಗಿದ್ದರೆ ಮಾತ್ರ ಅನುಮತಿ ಕೊಡಬೇಕು. ಅನಾಹುತವಾದರೆ ಅನುಮತಿಕೊಟ್ಟ ಅಧಿಕಾರಿಗಳನ್ನು ಹೊಣೆ ಮಾಡಬೇಕು.

ಆಶಾ ಯೋಗೇಂದ್ರ, ಗೃಹಿಣಿ, ಸೋಮವಾರಪೇಟೆ

ಕಾಟಕೇರಿ ಗ್ರಾಮದಲ್ಲಿರುವ ವಸತಿ ಶಾಲೆಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ವಿದ್ಯಾರ್ಥಿಯೋರ್ವ ಮೃತಪಟ್ಟಿರುವುದು ಅತ್ಯಂತ ನೋವಿನ ವಿಷಯ. ಜಿಲ್ಲಾಡಳಿತ ಜಿಲ್ಲೆಯಲ್ಲಿರುವ ಎಲ್ಲಾ ವಸತಿ ಶಾಲೆಗಳನ್ನು ಪರಿಶೀಲನೆಗೆ ಒಳಪಡಿಸಬೇಕು. ಮಕ್ಕಳ ಭದ್ರತೆ ಬಗ್ಗೆ ಜಿಲ್ಲಾಡಳಿತ ಮುತುವರ್ಜಿ ವಹಿಸಿಬೇಕು. ಕಠಿಣ ನಿಯಮಗಳನ್ನು ಜಾರಿ ಮಾಡಬೇಕು. ಅತ್ಯಂತ ಸುಸಜ್ಜಿತ ವಸತಿ ಶಾಲೆಗಳಿಗೆ ಮಾತ್ರ ಅನುಮತಿ ನೀಡಬೇಕು.

ಸಿ.ಬಿ. ಸುರೇಶ್ ಶೆಟ್ಟಿ, ತಾಲೂಕು ಅಧ್ಯಕ್ಷ, ಜಯಕರ್ನಾಟಕ ಸಂಘಟನೆ.

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಾಲೆಗಳು ಮುಖ್ಯ ಪಾತ್ರ ವಹಿಸುತ್ತದೆ. ಅಂಥದ್ದರಲ್ಲಿ ವಸತಿ ಶಾಲೆಗಳು ಗ್ರಾಮೀಣ ಪ್ರದೇಶದ ಮಕ್ಕಳಿಗೆ ವರದಾನ. ಆದರೆ ಅಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳು ಮತ್ತು ಮಕ್ಕಳಿಗೆ ಅಪಾಯ ಆಗದ ರೀತಿ ಎಚ್ಚರ ವಹಿಸುವುದು ಮುಖ್ಯ. ಇಂತಹ ಘಟನೆಗಳು ಮರುಕಳಿಸದಂತೆ ಅಲ್ಲಿನ ನಿರ್ವಾಹಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.

ಮುಖೇಶ್, ಗೋಣಿಕೊಪ್ಪಲು ನಿವಾಸಿ

ವಸತಿ ಶಾಲೆಗಳಲ್ಲಿ ಅಗ್ನಿ ಅವಘಡ ಸಂಭವಿಸಿದAಥÀ ಸಂದರ್ಭದಲ್ಲಿ ತುರ್ತಾಗಿ ಅಗ್ನಿ ನಂದಿಸಬೇಬೇಕಾದ ಎಲ್ಲಾ ಪೂರ್ವ ತಯಾರಿಗಳನ್ನು ಮಾಡಿಕೊಂಡಿರಬೇಕು. ರಾತ್ರಿಯ ಸಂದರ್ಭದಲ್ಲಿ ಬಲ್ಬ್ಗಳನ್ನು ಉರಿಸುವ ಸ್ವಿಚ್‌ಗಳನ್ನು ಹೊರತುಪಡಿಸಿ ಉಳಿದವುಗಳನ್ನು ಆಫ್ ಮಾಡುವುದು. ಅಗ್ನಿ ಅವಘಡ ಸಂಭವಿಸಿದAಥ ಸಂದರ್ಭದಲ್ಲಿ ಅದರಿಂದ ಹೇಗೆ ಪಾರಾಗಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು.

ಕಿರಣ್ ಕುಮಾರ್. ವಿರಾಜಪೇಟೆ ನಿವಾಸಿ

ಈಚೆಗೆ ಸÀರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿರುವುದರ ಹಿಂದೆ ಕೆಲವು ಪ್ರಮುಖ ರಾಜಕೀಯ ವ್ಯಕ್ತಿಗಳ ಪ್ರಭಾವ ಕಂಡುಬರುತ್ತಿದೆ. ಇದರಿಂದ ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಖಾಸಗಿ ಶಾಲಾ, ಕಾಲೇಜು ಕಡೆ ಮುಖ ಮಾಡುತ್ತಾರೆ. ಅದರೆ ಖಾಸಗಿ ಶಾಲಾ, ಕಾಲೇಜು ವಿದ್ಯಾ ಕೇಂದ್ರದಲ್ಲಿಯೂ ರಾಜಕೀಯ ವ್ಯಕ್ತಿಗಳ ಮೇಲುಗೈ ಇರುವುದು ವಿಷಾದನೀಯ. ಅದರಿಂದ ಮಕ್ಕಳ ಪೊಷಕರು ಖಾಸಗಿ ವಿದ್ಯಾ ಕೇಂದ್ರಕ್ಕೆ ಕಳುಹಿಸುವ ಮೊದಲು ತಮ್ಮ ತಮ್ಮ ಮಕ್ಕಳ ಭದ್ರತೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ

ಪವನ್ ತೊಟಂಬೈಲ್, ನರಿಯಂದಡ ಗ್ರಾಮ

ವಸತಿ ಶಾಲೆಯ ಪುಟ್ಟ ಬಾಲಕನ ಸಾವಿಗೆ ಹೊಣೆ ಯಾರು? ವಸತಿ ಶಾಲೆಗಳ ದಾಖಲೆ ಸರಿಯಾಗಿದೆಯೇ ? ಎಂದು ವರ್ಷಕ್ಕೊಂದು ಬಾರಿಯಾದರೂ ಇಲಾಖೆ ಪರೀಕ್ಷಿಸಬೇಕು. ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು. ಪೋಷಕರು ಮಕ್ಕಳನ್ನು ದಾಖಲಿಸುವ ಸಂದರ್ಭದಲ್ಲಿ ವಸತಿ ಶಾಲೆಯಲ್ಲಿ ಮುಂಜಾಗ್ರತಾ ನಿಯಮ ಪಾಲಿಸಲಾಗಿದೆಯೇ ಎಂದು ಖಾತ್ರಿಪಡಿಸಿ ದಾಖಲಾತಿ ಪಡೆಯಬೇಕು.

ಬೆಳಿಯಂಡ್ರ ಹರಿಪ್ರಸಾದ್, ಅಧ್ಯಕ್ಷ, ಅಯ್ಯಪ್ಪ ಯುವಕ ಸಂಘ, ನರಿಯಂದಡ, ಚೆಯ್ಯಂಡಾಣೆ

ಪ್ರತಿ ಶಾಲೆಯ ಆವರಣದಲ್ಲಿ ಅಗ್ನಿಶಾಮಕ ಯಂತ್ರ ಅಳವಡಿಕೆ ಕಡ್ಡಾಯ ಮಾಡಬೇಕು. ಇದರ ಬಳಕೆ ಬಗ್ಗೆ ವಸತಿ ಶಾಲೆಯ ಹಾಗೂ ಪ್ರತಿ ಶಾಲೆಯ ಸಿಬ್ಬಂದಿ ವರ್ಗದವರಿಗೂ ಗೊತ್ತಿರಬೇಕು. ಯಾವುದೇ ಅಗ್ನಿ ಅವಘಡ ಸಂಭವಿಸಿದಾಗ ತುರ್ತು ನಿರ್ಗಮನ ಬಾಗಿಲು ಇರಲೇ ಬೇಕು. ಇಂಥ ಅಗ್ನಿ ಅವಘಡ ಆದಾಗ ರಕ್ಷಣೆಗೆ ಸುರಕ್ಷಿತವಾದ ಒಂದು ಕೊಠಡಿ ನಿರ್ಮಾಣ ಮಾಡಿರಬೇಕು. ಈ ಕೊಠಡಿ ಬಗ್ಗೆ ಮಕ್ಕಳಿಗೆ ತಿಳಿಸಿರಬೇಕು. ಪ್ರತಿ ನಿತ್ಯ ಸಿಬ್ಬಂದಿ ಎಲ್ಲಾ ಕೊಠಡಿಗಳನ್ನು ಬೆಳಗ್ಗೆ ಸಂಜೆ ಪರಿಶೀಲನೆ ನಡೆಸಿರಬೇಕು. ವಸತಿ ಶಾಲೆಗಳಲ್ಲಿ ಮಕ್ಕಳು ಮಲಗುವ ಕೊಠಡಿಯಲ್ಲಿ ಶಿಕ್ಷಕರು ಸಹ ಮಲಗಬೇಕು. ಪ್ರಥಮ ಚಿಕಿತ್ಸೆ ಕಿಟ್ ಪ್ರತಿ ಶಾಲಾ ಕಾಲೇಜಿನಲ್ಲಿ ಇಟ್ಟಿರಬೇಕು ಹಾಗೂ ಅದರ ಬಳಕೆ ಹೇಗೆ ಎಂಬ ಅರಿವು ಸಹ ಇರಬೇಕು.

ಸುಪರ್ಣ ಕೃಷ್ಣಾನಂದ, ವೈದ್ಯಾಧಿಕಾರಿ, ಪ್ರಾಥಮಿಕ ಅರೋಗ್ಯ ಕೇಂದ್ರ, ಆಲೂರು ಸಿದ್ದಾಪುರ

ಇಂಥÀ ದುರ್ಘಟನೆ ಎಲ್ಲೂ ನಡೆಯಬಾರದು. ಪುಟ್ಟ ಮಕ್ಕಳನ್ನು ಪೋಷಕರು ವಸತಿ ಶಾಲೆ ಹಾಗೂ ಇತರೆ ಶಾಲೆಗಳ ಮೇಲೆ ನಂಬಿಕೆ ಇಟ್ಟು ಬಿಟ್ಟಿರುತ್ತಾರೆ. ಆ ಮಕ್ಕಳಿಗೆ ಶಾಲೆಯ ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಯೇ ಪೋಷಕರು ಆಗಿರುತ್ತಾರೆ. ವಸತಿ ಶಾಲೆ ಹಾಗೂ ಇತರೆ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಅತಿಯಾದ ಎಚ್ಚರಿಕೆ ವಹಿಸಬೇಕಿದೆ. ಆಗ ಇಂಥ ದುರ್ಘಟನೆ ನಡೆಯುವುದಿಲ್ಲ. ಅದರಲ್ಲೂ ವಸತಿ ಶಾಲೆಗಳು ಹೆಚ್ಚು ಮುತುವರ್ಜಿ ವಹಿಸಬೇಕು.

ಗುಣರಾಜು, ಗ್ರಂಥ ಪಾಲಕಿ, ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜು, ಕೊಡ್ಲಿಪೇಟೆ

ದುರ್ಘಟನೆ ಸಂಭವಿಸಿದ ಕಾಟಕೇರಿ ಶಾಲೆ ನಾನು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದೇವೆ. ಮೇಲ್ನೋಟಕ್ಕೆ ಅಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಆಕಸ್ಮಿಕ ಸಂಭವಿಸಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಕೂಲಂಕುಶವಾಗಿ ತನಿಖೆ ಆಗಬೇಕು. ಸತ್ಯ ಹೊರಬರಬೇಕು. ವಸತಿ ಶಾಲೆಯವರ ನಿರ್ಲಕ್ಷ್ಯ ಇದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ವಿದ್ಯುತ್ ಅವಘಡ ಬಗ್ಗೆ ಸೂಕ್ತ ತನಿಖೆ ಮಾಡಿಸಲಾಗುವುದು. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net