

ಮಡಿಕೇರಿ:
ಕೊಡಗಿನಲ್ಲಿ ಈ ವರ್ಷ ಬೇಸಿಗೆ ರಜೆ ಕಳೆದು ಶಾಲೆ ಆರಂಭ ಆಗುವುದಕ್ಕೆ ಮೊದಲೇ ಮಳೆಯ ರಜೆ ಘೋಷಣೆ ಆಗಿತ್ತು. ಹಾಗಾಗಿ ರಾಜ್ಯಾದ್ಯಂತ ಮೇ 29ಕ್ಕೆ ಶಾಲೆಗಳು ಪುನಾರಂಭ ಆದರೆ, ಜಿಲ್ಲೆಯಲ್ಲಿ ಮಾತ್ರ ಜೂ.2ಕ್ಕೆ ಶಾಲೆಗಳ ಬಾಗಿಲು ತೆರೆಯಲಾಯಿತು. ಹೆಚ್ಚು ಮಳೆಯ ಸಾಧ್ಯತೆ ಕಾರಣ ಕೊಡಗಿನಲ್ಲಿ ರೆಡ್ ಅಲರ್ಟ್ ಇದ್ದಿದ್ದರಿಂದ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಕೊಟ್ಟಿತ್ತು.
ಕಳೆದ ವಾರವೂ ಭಾರಿ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಕೊಡಗಿನಲ್ಲೂ ರೆಡ್ ಅಲರ್ಟ್ ಘೋಷಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ಮತ್ತೆ ರಜೆ ಪ್ರಕಟಿಸಿತ್ತು. ವಿಶೇಷ ಎಂದರೆ ರೆಡ್ ಅಲರ್ಟ್ ಇದ್ದರೂ ಜಿಲ್ಲೆಯ ಹೆಚ್ಚಿನ ಭಾಗದಲ್ಲಿ ಮಳೆ ಆಗಿರಲಿಲ್ಲ. ಕೆಲವು ಕಡೆಗಳಂತೂ ಬಿಸಿಲಿನ ವಾತಾವರಣ ಇತ್ತು. ಹಾಗಾಗಿ 'ಮಳೆ ರಜೆ' ಔಚಿತ್ಯ ಮತ್ತು ಮಾನದಂಡದ ಬಗ್ಗೆ ಜಿಲ್ಲೆಯಲ್ಲಿ ಚರ್ಚೆ ಆರಂಭ ಆಗಿದೆ. ಇದೀಗ ಸೋಮವಾರ (ಜೂ.16) ಕೂಡ ಕೊಡಗಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇದೆ.
ಬಿರುಸಿನ ಮಳೆ ಕೊಡಗಿಗೆ ಹೊಸದೇನೂ ಅಲ್ಲ. ಇಲ್ಲಿನವರು ಇದಕ್ಕೆ ಹೊಂದಿಕೊAಡಿದ್ದಾರೆ. ಮೊದಲೆಲ್ಲಾ ಎಂಥ ಮಳೆ ಬಂದರೂ ರಜೆ ಕೊಡುತ್ತಿರಲಿಲ್ಲ. ಜುಲೈನಲ್ಲಿ ಮಾತ್ರ 15 ದಿನಗಳ ಕಾಲ ಒಟ್ಟಿಗೆ ರಜೆ ಕೊಡುತ್ತಿದ್ದರು. ಆಗಿನ ಅಂಥ ಮಳೆ ಸಂದರ್ಭದಲ್ಲೂ ಏನೂ ಆಗುತ್ತಿರಲಿಲ್ಲ. ಈಗ ಈ ರೀತಿಯ ಮಳೆಗೆಲ್ಲಾ ರಜೆ ಕೊಟ್ಟರೆ ಮಕ್ಕಳ ಪಾಠ, ಪ್ರವಚನದ ಕತೆಯೇನು ಎಂದು ಬಹುತೇಕರು ಪ್ರಶ್ನೆ ಮಾಡುತ್ತಿದ್ದಾರೆ.
ಅಂದಿನ ದಿನಗಳಿಗೂ ಈಗಿನ ಸಂದರ್ಭಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಆಗಿನ ಮಕ್ಕಳಂತೆ ಈಗಿನವರಿಗೆ ವಿಪತ್ತುಗಳನ್ನು ಎದುರಿಸುವ ಚಾಕಚಕ್ಯತೆ ಇಲ್ಲ. ಏನೇ ಚಿಕ್ಕ ಅವಘಡ ಸಂಭವಿಸಿದರೂ ಜಿಲ್ಲಾಡಳಿತ ಹೊಣೆ ಹೊರಬೇಕಾಗುತ್ತದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಕೊಟ್ಟರೆ ತಪ್ಪೇನಿಲ್ಲ. ತಪ್ಪಿ ಹೋದ ತರಗತಿಗಳನ್ನು ಮುಂದೆ ಶನಿವಾರಗಳಂದು ದಿನಪೂರ್ತಿ ಶಾಲೆ ನಡೆಸುವ ಮೂಲಕ ಹೊಂದಿಸಿಕೊಳ್ಳಬಹುದು ಎನ್ನುವವರೂ ಇದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಬೇಕು. ಆದರೆ ಇದನ್ನು ಇಡೀ ಜಿಲ್ಲೆಗೆ ಅನ್ವಯಿಸುವ ಬದಲು ಮಳೆ ಹೆಚ್ಚಿರುವ ತಾಲೂಕು ಅಥವಾ ಹೋಬಳಿಗೆ ಸೀಮಿತ ಮಾಡಲಿ ಎನ್ನುವ ಸಲಹೆಗಳು ಕೇಳಿಬರುತ್ತಿದೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ಹಂಚಿಕೊಡಿದ್ದಾರೆ.
ಇತ್ತೀಚೆನ ದಿನಗಳಲ್ಲಿ ಮಳೆ ಎಲ್ಲಾ ಕಡೆಯೂ ಒಂದೆ ಸಮನೆ ಬರುತ್ತಿಲ್ಲ. ಒಂದು ಕಡೆ ಮಳೆಯಾದರೆ ಮತ್ತೊಂದು ಕಡೆ ಬಿಸಿಲು ಇರುತ್ತದೆ. ಹೀಗಿರುವಾಗ ಮುನ್ಸೂಚನೆ ಆಧರಿಸಿ ರಜೆ ಘೋಷಿಸುವುದು ಸರಿಯಲ್ಲ. ಶಾಲೆ ಆರಂಭ ಆದಾಗ್ಲೇ ರಜೆ ನೀಡಿದರೆ ಮುಂದಿನ ದಿನಗಳಲ್ಲಿ ಪಾಠ ಮುಗಿಸಲು ಕಷ್ಟ ಆಗಬಹುದು. ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಹಾಗಾಗಿ ಮಳೆಯ ತೀವ್ರತೆ ನೋಡಿ ರಜೆ ನೀಡಿದರೆ ಉತ್ತಮ.
ಜಯಪ್ರಕಾಶ್, ಪೊನ್ನಂಪೇಟೆ ನಿವಾಸಿ
ಜಿಲ್ಲೆಯಲ್ಲಿ ಮಳೆ ಪ್ರಾರಂಭ ಆಗಿದೆ. ಪ್ರತಿ ವರ್ಷ ಜೂನ್‌ನಲ್ಲಿ ಮಳೆ ಸಾಮಾನ್ಯ. ಆದರೆ ಮಳೆ ಪ್ರಾರಂಭ ಆದ ತಕ್ಷಣ ಜಿಲ್ಲಾಡಳಿತ ಶಾಲೆಗೆ ರಜೆ ಘೋಷಣೆ ಮಾಡುತ್ತಿರುವುದು ದುರಂತ. ಆಯಾ ಭಾಗದ ಶಿಕ್ಷಣಾಧಿಕಾರಿಗಳಿಗೆ ಅಥವಾ ತಹಸೀಲ್ದಾರ್ ಅವರಿಗೆ ರಜೆ ನೀಡುವ ಅವಕಾಶ ನೀಡಿದರೆ ಒಳ್ಳೆಯದು. ಜಿಲ್ಲಾ ಕೇಂದ್ರದಲ್ಲಿ ಮಳೆ ಇದ್ದರೆ ಕೆಲ ಭಾಗದಲ್ಲಿ ಮಳೆ ಇರುವುದಿಲ್ಲ. ಇದರಿಂದ ನಮಗೆ ರಜೆ ಏಕೆ ಕೊಟ್ಟಿದ್ದಾರೆ ಎಂದು ಮಕ್ಕಳಿಗೆ ಅನುಮಾನ ಬರುವಂತಾಗಿದೆ.
ದೀಕ್ಷಿತ್, ಪೋಷಕರು, ಶನಿವಾರಸಂತೆ
ಮಳೆಗಾಲದಲ್ಲಿ ಮಳೆ ಬರಲೇ ಬೇಕು, ಮಳೆ ಬಂದ ತಕ್ಷಣ ಶಾಲೆ ಕಾಲೇಜುಗಳಿಗೆ ರಜೆ ಕೊಡುವುದು ಸರಿ ಅಲ್ಲ. ಮೊದಲು ಶಾಲಾ ಕಾಲೇಜುಗಳಿಗೆ ತೆರಳುವ ಮಾರ್ಗ ಪರಿಶೀಲನೆ ಮಾಡಬೇಕು. ರಸ್ತೆಯಲ್ಲಿ ಹೊಳೆ ಅಥವಾ ತೋಡು ನೀರು ಹರಿಯುತ್ತಿದೆಯಾ ? ಅಥವಾ ರಸ್ತೆ ವ್ಯವಸ್ಥೆ ಹೇಗಿದೆ ? ನಡೆದು ಬರಲು ಮಕ್ಕಳಿಗೆ ತೊಂದರೆ ಇದೆಯಾ ಎಂದು ಮೊದಲು ಸಂಬAಧ ಪಟ್ಟವರು ಪರಿಶೀಲನೆ ಮಾಡಬೇಕು. ಇದೀಗ ಮಳೆ ಪ್ರಾರಂಭ ಅಷ್ಟೇ. ಇನ್ನು ಮುಂದಕ್ಕೆ ವಿಪರೀತ ಮಳೆ ಬರಲಿದೆ, ಇತ್ತೀಚಿಗೆ ರಜೆ ನೀಡುತ್ತಿರುವುದು ನೋಡಿದರೆ ಮುಂದಿನ ಸೆಪ್ಟೆಂಬರ್ ತಿಂಗಳ ವರೆಗೆ ಶಾಲಾ ಕಾಲೇಜಿಗೆ ರಜೆ ನೀಡುವ ಲಕ್ಷಣ ಕಾಣುತ್ತಿದೆ.
ಅಕ್ಷಿತಾ, ಖಾಸಗಿ ಕಂಪನಿ ಉದ್ಯೋಗಿ, ದುಂಡಳ್ಳಿ
ಭಾರೀ ಮಳೆ, ಬಿರುಗಾಳಿ, ಪ್ರವಾಹ, ಮುನ್ಸೂಚನೆಗಳು ಪ್ರಜೆಗಳ ಸುರಕ್ಷತೆಯ ದೃಷ್ಟಿಯಿಂದ ಬಹುಮುಖ್ಯ. ಮಕ್ಕಳಿಗೆ ಶಾಲೆಗಳಿಗೆ ಹೋಗಲು ಅಪಾಯ ಇದೆ. ಹೀಗಾಗಿ, ಮುನ್ಸೂಚನೆಯ ತೀವ್ರತೆ, ಸ್ಥಳೀಯ ಪರಿಸ್ಥಿತಿ ಗಮನದಲ್ಲಿಟ್ಟು ರಜೆ ನೀಡುವುದು ಸೂಕ್ತ.
ಸುಮನಾ ಮ್ಯಾಥ್ಯು, ಮಕ್ಕಳ ಹಕ್ಕುಗಳ ಕಾರ್ಯಕರ್ತೆ, ಸೋಮವಾರಪೇಟೆ
ಜಿಲ್ಲೆಯಲ್ಲಿ ಜೋರು ಮಳೆಯ ಸಂದರ್ಭ ರಜೆ ನೀಡುವುದು ಉತ್ತಮ. ಆಯಾಯ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗೆ ರಜೆ ನೀಡುವ ಜವಾಬ್ದಾರಿ ನೀಡಿದರೆ ಒಳ್ಳೆಯದು. ಇಲ್ಲದಿದ್ದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಮುಂದಿನ ದಿನಗಳಲ್ಲಿ ಕಷ್ಟ ಉಂಟಾಗಲಿದೆ
ಸುರೇಶ್, ಗುಹ್ಯ ಗ್ರಾಮ, ಸಿದ್ದಾಪುರ
ಕೊಡಗು ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಗಾಳಿ ಮಳೆ ಇಲ್ಲಿನ ನಿವಾಸಿಗಳಿಗೆ ಹೊಸತೇನಲ್ಲ. ಅದೇ ರೀತಿ ಇಲ್ಲಿನ ಮಕ್ಕಳಿಗೆ ಮಳೆಯಲ್ಲಿ ಶಾಲಾ-ಕಾಲೇಜುಗಳಿಗೆ ಹೋಗುವುದು ಒಂದು ರೀತಿಯಲ್ಲಿ ಅಭ್ಯಾಸವಾಗಿರುತ್ತದೆ. ಆದರಿಂದ ರೆಡ್ ಅಲರ್ಟ್ ಎಂದಾಕ್ಷಣ ರಜೆ ನೀಡದೇ ಮಳೆಯ ಪ್ರಮಾಣ ಗಣನೀಯವಾಗಿ ಹೆಚ್ಚುತಿದ್ದರೆ, ವಿಪರೀತಿ ಗಾಳಿ ಮಳೆ ಆಗುತ್ತಿದ್ದರೆ ತಾಲೂಕುವಾರು ಗಣನೆಗೆ ತೆಗೆದುಕೊಂಡು ರಜೆ ನೀಡುವುದು ಉತ್ತಮ.
ಬಿ.ಕೆ. ವಿಶ್ವನಾಥ್, ರೈತ, ವಿರಾಜಪೇಟೆ
ಹವಾಮಾನ ವರದಿಯನ್ನಾಧÀರಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಘೋಷಿಸುವುದು ಕೆಲವೊಮ್ಮೆ ಸರಿ ಅನಿಸಿದರೂ ಇತ್ತೀಚಿನ ಬೆಳವಣಿಗೆಯಲ್ಲಿ ಮಳೆ ಕೆಲವು ವ್ಯಾಪ್ತಿಯಲ್ಲಿ ಮಾತ್ರ ಸುರಿಯುತ್ತಿರುತ್ತದೆ. ಆದ್ದರಿಂದ ಆಯಾ ಶಾಲಾ-ಕಾಲೇಜುಗಳ ವ್ಯಾಪ್ತಿಗೆ ಸಂಬAಧಪಟ್ಟAತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜವಾಬ್ದಾರಿ ವಹಿಸಿಕೊಂಡು ಶಾಲಾ ಮುಖ್ಯಸ್ಥರಿಗೆ ರಜೆ ಘೋಷಣೆಗೆ ಅನುಮತಿ ನೀಡುವುದು ಸೂಕ್ತ. ಇದರೊಂದಿಗೆ ಕಾಡು ದಾರಿ, ಹೊಳೆ, ನದಿ ತೊರೆಗಳನ್ನು ಹಾದು ಬರುವ ವಿದ್ಯಾರ್ಥಿಗಳಿಗೆ ಮಳೆಗಾಲದಲ್ಲಿ ಮುನ್ನೆಚ್ಚರಿಕಾ ಕ್ರಮ ವಹಿಸುವುದು ಅಗತ್ಯ. ಇಂಥ ತುರ್ತು ಸಂದರ್ಭದಲ್ಲಿ ನೀಡಿದ ರಜೆಯನ್ನು ಮಳೆಗಾಲದ ನಂತರ ಶನಿವಾರ ದಿನಪೂರ್ತಿ ತರಗತಿ ನಡೆಸುವುದು ಉತ್ತಮ.
ಪುದಿಯನೆರವನ ವೀಣಾ ವೆಂಕಟೇಶ್, ಪಾಲೂರು ಗ್ರಾಮ
ಹೆಚ್ಚು ಮಳೆ, ಗಾಳಿ ಇದ್ದಾಗ ಮಕ್ಕಳ ಸುರಕ್ಷತೆಗೋಸ್ಕರ ರಜೆ ಅಗತ್ಯ. ಆದರೆ ಈಗ ಮಳೆ ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಒಂದೇ ರೀತಿ ಆಗುವುದಿಲ್ಲ. ಕೆಲವು ಭಾಗದಲ್ಲಿ ಹೆಚ್ಚು ಮಳೆ ಇರುತ್ತದೆ. ಮತ್ತೆ ಕೆಲವು ಕಡೆ ಮಳೆಯ ಪ್ರಮಾಣ ಕಡಿಮೆ ಇರುತ್ತದೆ. ರೆಡ್ ಅಲರ್ಟ್ ಇದ್ದಾಗ ಬಿಸಿಲು ಇರುವ ಜಾಗಗಳು ಇದೆ. ಹಾಗಾಗಿ ರಜೆ ಹೆಚ್ಚು ಮಳೆ, ಗಾಳಿ ಇರುವ ಪ್ರದೇಶದ ಮಕ್ಕಳಿಗೆ ಅನುಕೂಲ ಆಗುವಂತಿರಬೇಕು. ರಜೆ ಕೊಡುವುದನ್ನು ಆಯಾಯ ಶಾಲೆ ಮುಖ್ಯಸ್ಥರ ವಿವೇಚನೆಗೆ ಬಿಡಬೇಕು.
ಚೊಕ್ಕಾಡಿ ಪ್ರೇಮಾ ರಾಘವಯ್ಯ, ಮಡಿಕೇರಿ ನಿವಾಸಿ
ರಜೆಯ ಬಗ್ಗೆ ನಡೆದಿರುವ ಚರ್ಚೆ ನನ್ನ ಗಮನಕ್ಕೂ ಬಂದಿದೆ. ಕೊಡಗಿನಲ್ಲಿ ಮಳೆಗಾಲದ ಸನ್ನಿವೇಶವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಯಾರಿಗೂ ಯಾವುದೇ ಹಾನಿ ಆಗಬಾರದು ಎನ್ನುವ ಉದ್ದೇಶ ನಮ್ಮದಾಗಿದೆ. ವಿಶೇಷವಾಗಿ ಮಕ್ಕಳಿಗೆ ಸಮಸ್ಯೆ ಆಗಬಾರದು. ಇಂಥ ಸಂದರ್ಭದಲ್ಲಿ ಯಾವಾಗ ಏನು ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಪ್ರತಿಯೊಬ್ಬರ ಜೀವವೂ ಅಮೂಲ್ಯ. ಐಎಂಡಿ ಮತ್ತು ಸರ್ಕಾರದ ಸೂಚನೆ ಗಮನಿಸಿ ಎಲ್ಲಾ ರೀತಿಯ ಅಂಕಿ-ಅAಶಗಳ ಮೇಲೆಯೇ ರಜೆ ಘೋಷಣೆ ಮಾಡಲಾಗುತ್ತದೆ. ರಜೆಯನ್ನು ಬೆಳಗ್ಗೆ 8 ಗಂಟೆಗೆ ಹೇಳಿದರೆ ಯಾವುದೇ ಪ್ರಯೋಜನ ಇಲ್ಲ. ರಜೆಯಿಂದ ತಪ್ಪಿದ ತರಗತಿಗಳನ್ನು ಮಳೆಗಾಲ ಮುಗಿದ ನಂತರ ಶಿಕ್ಷಣ ಇಲಾಖೆಯವರು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ.
ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ