

ಸುಂಟಿಕೊಪ್ಪ:
ಯಾವುದೇ ಒಂದು ಶಿಕ್ಷಣ ಸಂಸ್ಥೆಯ ಸಮಗ್ರ ಅಭಿವೃದ್ಧಿಯಲ್ಲಿ ಹಳೆಯ ವಿದ್ಯಾರ್ಥಿಗಳ ಪಾತ್ರ ದೊಡ್ಡದು ಎಂದು ಮೈಸೂರು- ಕೊಡಗು ಸಂಸದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಹೇಳಿದರು. ಇಲ್ಲಿನ ಸರ್ಕಾರಿ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳ ಹಳೆಯ ವಿದ್ಯಾರ್ಥಿಗಳ ವತಿಯಿಂದ ಮಂಜನಾಥಯ್ಯ ಮೀನಾಕ್ಸಮ್ಮ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವ್ಯಕ್ತಿತ್ವ ವಿಕಸನ, ಗೌರವ ಸಮರ್ಪಣೆ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
2047ರ ಹೊತ್ತಿಗೆ ಭಾರತವನ್ನು ವಿಕಸಿತ ಭಾರತ ಮಾಡಬೇಕೆಂದು ಪ್ರಧಾನಿ ಕನಸು ಕಂಡಿದ್ದಾರೆ. ಆ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಭಾರತ ಸರ್ಕಾರ ಹಮ್ಮಿಕೊಂಡಿದೆ. ಇಂತಹ ಕಾರ್ಯಕ್ರಮಗಳಲ್ಲಿ ಶಿಕ್ಷಣ ಪದ್ಧತಿಯನ್ನು ಅಮುಲಾಗ್ರವಾಗಿ ಹೊಸತನದತ್ತ ಕೊಂಡೊಯ್ಯುವುದು ನಮ್ಮ ಆದ್ಯತೆಯಾಗಿದೆ. ಪ್ರಸ್ತುತ ವಿದ್ಯಾರ್ಥಿಗಳು ಅಮೃತ ಕಾಲದ ಪೀಳಿಗೆಯವರಾಗಿದ್ದು ಹೊಸತನ ಮತ್ತು ಬದಲಾವಣೆಗಳಿಗೆ ತಮ್ಮನ್ನು ತೆರೆದುಕೊಂಡು ಶಿಕ್ಷಣ ವ್ಯವಸ್ಥೆಯನ್ನು ಸದುಪಯೋಗ ಪಡಿಸಿಕೊಂಡು ಭವ್ಯ ಭಾರತದ ಸತ್ಪ್ರಜೆಗಳಾಗಿ ಬಾಳಬೇಕೆಂದರು.
ಕೊಡಗು ಪ್ರಕೃತಿ ರಮಣೀಯತೆ ಮತ್ತು ರಾಷ್ಟ್ರೀಯತೆ ಮೇಳೈಸಿದ ಜಿಲ್ಲೆಯಾಗಿದ್ದು, ಮೈಸೂರು ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತಿಕೆಯನ್ನು ಹೊಂದಿದ ಪ್ರದೇಶವಾಗಿದೆ. ಮೈಸೂರು ಮತ್ತು ಕೊಡಗನ್ನು ಯಾರು ಯಾರಿಗೂ ಪರಿಚಯಿಸಬೇಕಾದ ಅಗತ್ಯವಿಲ್ಲ. ಅಂತಹ ನೆಲ, ಜಲ, ಪ್ರಾದೇಶಿಕ ಸೊಗಡು ,ಸಾಂಸ್ಕೃತಿಕ ಮಹತ್ವ ಮತ್ತು ಜನಜೀವನದ ವೈವಿಧ್ಯತೆಗಳನ್ನು ಹೊಂದಿದ ಪ್ರದೇಶ ಇದು ಎಂದು ಹೇಳಿದರು.
ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ. ರಂಗಧಾಮಪ್ಪ ಮಾತನಾಡಿ,
ಶಾಲೆಯ ಅಭಿವೃದ್ಧಿಗೆ ನಮ್ಮ ಶಾಲೆ, ನಮ್ಮ ಜವಾಬ್ದಾರಿ ಕಾರ್ಯಕ್ರಮದಡಿ ಈ ಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ಈ ಶಾಲೆಗೆ ಉತ್ತಮ ಕೊಡುಗೆ ನೀಡಿರುವುದು ಹೆಮ್ಮೆ. ಮಕ್ಕಳಿಗೆ ಪೂರಕವಾಗಿ ಲೇಖನ ಸಾಮಗ್ರಿಗಳನ್ನು ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ವಾಗ್ಮಿ ಬೆಂಗಳೂರಿನ ನಿಖಿತ್ ರಾಜ್ ಮೌರ್ಯ ಮಾತನಾಡಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಅಬ್ದುಲ್ ಕಲಾಂ ಬಗ್ಗೆ ಶಿಕ್ಷಕರು ಮಕ್ಕಳಿಗೆ ಹೇಳಿ ಕೊಡಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು. ಸವಾಲನ್ನು ಸವಾಲಾಗಿ ಸ್ವೀಕರಿಸಬೇಕು ಮತ್ತು ಎದುರಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ. ಲತೀಫ್ ಮಾತನಾಡಿದರು.
ಸಂಸದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಮತ್ತು ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ದಾನಿಗಳನ್ನು ಇದೇ ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಸುಂಟಿಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶಿವಮ್ಮ, ಕಾಫಿ ಬೆಳೆಗಾರರಾದ ಆನಂದ ಬಸಪ್ಪ, ಎಸ್.ಎಲ್.ಎನ್ ಸನೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್. ವಿಶ್ವನಾಥನ್, ಶಾಂತಿಗೇರಿ ತೋಟದ ಮಾಲೀಕ ಸುಂದರA ರಾಮಸ್ವಾಮಿ, ಮೋದೂರು ತೋಟದ ಮಾಲೀಕ ಬಿ.ಎಸ್ ನಕುಲ್ ಪೂಣಚ್ಚ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ. ಲೋಕೇಶ್ ಕುಮಾರ್, ಅರಸು ಪ್ಲಾಂಟೇಷನ್ ಮಾಲೀಕ ಪೃಥ್ವಿ ಪೊನ್ನಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಧ ಶ್ರೀಲತಾ, ಸರ್ಕಾರಿ ಪ್ರೌಢ ಶಾಲೆಯ ಉಪಪ್ರಾಂಶುಪಾಲ ಬಾಲಕೃಷ್ಣ, ಜಿ.ಯಂಪಿ ಶಾಲೆಯ ಮುಖ್ಯ ಶಿಕ್ಷಕಿ ಗೀತಾ ಮತ್ತಿತರರು ಇದ್ದರು.