ಏಕಪೋಷಕ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್

gramasabhe
ಆಲೂರು ಗ್ರಾಮ ಪಂಚಾಯಿತಿ ವತಿಯಿಂಧ ಮಕ್ಕಳ ಗ್ರಾಮಸಭೆ ಆಲೂರಿನ ಮೂಕಾಂಬಿಕಾ ಸಭಾಭವನದಲ್ಲಿ ನಡೆಯಿತು.
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಬೇಕು. ಏಕಪೋಷಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಬೇಕು. ಗ್ರಾಮಕ್ಕೆ ಸರ್ಕಾರಿ ಬಸ್ ಒದಗಿಸಬೇಕಿದ್ದು, ವಿದ್ಯಾರ್ಥಿಗಳಿಗೆ ಅಗತ್ಯ ಸೌಕರ್ಯ ನೀಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

ಆಲೂರು ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಳ ಗ್ರಾಮಸಭೆಯಲ್ಲಿ ಮನವಿ ಮಾಡಿದರು.

ಪ್ರಜ್ಞಾ ಮಾತನಾಡಿ, ಆಧಾರ್ ನವೀಕರಣಕ್ಕೆ ಕುಂದಾಪುರಕ್ಕೆ ತೆರಳಬೇಕಿದ್ದು, ಈ ವ್ಯವಸ್ಥೆ ಗ್ರಾಮಗಳಲೇ ಕಲ್ಪಿಸಬೇಕೆಂದರು. ವೈಷ್ಣವಿ ಮಾತನಾಡಿ, ಜನನ ಪ್ರಮಾಣಪತ್ರದಲ್ಲಿ ಇನಿಶ್ಯಲ್ ಕಡ್ಡಾಯಗೊಳಿಸಲಾಗಿದ್ದು, ಇದನ್ನು ಸೇರ್ಪಡೆಗೊಳಿಸಲು ಪಂಚಾಯಿತಿ ಮಟ್ಟದಲ್ಲಿ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಸಾಕ್ಷಿ ಮತ್ತು ಕೃತಿಕಾ ದನಿಗೂಡಿಸಿದರು.

ಅನನ್ಯ ವಿಚಾರ ಪ್ರಸ್ತಾಪಿಸಿ, ಶಾಲೆಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕಿದ್ದು, ಶಾಲಾವರಣಗಳ ಸಮೀಪವಿರುವ ಮುಖ್ಯರಸ್ತೆಯಲ್ಲಿ ಹಂಪ್ಸ್ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಶಾಲಾ ಕಟ್ಟಡದ ಮೇಲ್ಛಾವಣಿ ದುರಸ್ತಿ, ಆವರಣಗೋಡೆ ರಚನೆ, ಕಾಲುಸಂಕ ನಿರ್ಮಾಣ, ಬೀದಿನಾಯಿಗಳ ಸಮಸ್ಯೆ, ರಸ್ತೆ ದುರಸ್ತಿ, ಬೀದಿದೀಪಗಳ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ಸಭೆಯಲ್ಲಿ ಪ್ರಸ್ತಾಪಿಸಿ ಪರಿಹಾರಕ್ಕೆ ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ ದೇವಾಡಿಗ ಅಧ್ಯಕ್ಷತೆ ವಹಿಸಿ, ಮಕ್ಕಳಿಂದ ಸಭೆಯಲ್ಲಿ ಹಲವಾರು ಬೇಡಿಕೆ ಬಂದಿದ್ದು, ಪಂಚಾಯಿತಿ ವತಿಯಿಂದ ಸಮಸ್ಯೆಗಳ ನಿವಾರಣೆಗೆ ಗರಿಷ್ಠ ಪ್ರಯತ್ನಿಸಲಾಗುವುದು. ಸಮಸ್ಯೆಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ರವಾನಿಸಿ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ನೋಡಲ್ ಅಧಿಕಾರಿ ಪರಶುರಾಮ್, ಗ್ರಾಪಂ ಉಪಾಧ್ಯಕ್ಷೆ ಸಿಂಗಾರಿ, ಸದಸ್ಯರಾದ ರವಿ ಶೆಟ್ಟಿ, ಜಲಜಾ ಶೆಡ್ತಿ, ಶ್ರೀಮತಿ, ಮಂಜುಳಾ, ಪ್ರಸನ್ನಕುಮಾರ್, ವಿದ್ಯಾರ್ಥಿಮಿತ್ರ ಆಶಾ, ವಿದ್ಯಾರ್ಥಿ ಪ್ರತಿನಿಧಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಮುಖ್ಯ ಶಿಕ್ಷಕರು, ಶಿಕ್ಷಕರು, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು. ನರಸಿಂಹ ಗಾಣಿಗ ಹರೆಗೋಡು ಪ್ರಸ್ತಾವನೆಗೈದರು. ಪಿಡಿಒ ರೂಪಾ ಗೋಪಿ ನಿರೂಪಿಸಿದರು.

ದೃಢೀಕರಣದ ಮಾನದಂಡ ಸರಳಗೊಳಿಸಿ

ವಿದ್ಯಾರ್ಥಿಗಳ ಜಾತಿ ಆದಾಯ ಪ್ರಮಾಣಪತ್ರ ಅರ್ಜಿ ಸಲ್ಲಿಸುವ ಸಂದರ್ಭ ತಂದೆಯ ಶೈಕ್ಷಣಿಕ ಅರ್ಹತೆ ಕುರಿತು ಶಾಲಾ ದೃಢೀಕರಣ ಪತ್ರ ಕಡ್ಡಾಯಗೊಳಿಸಲಾಗಿದ್ದು, ಬಹುತೇಕ ಪಾಲಕರು ಅನಕ್ಷರಸ್ಥರಾಗಿರುವುದರಿಂದ ದೃಢೀಕರಣ ಪ್ರಮಾಣಪತ್ರ ಪಡೆಯುವುದು ಕಷ್ಟಸಾಧ್ಯ ಎಂದು ನಂದಿನಿ ಮತ್ತು ಕೃತಿಕಾ ಅಸಮಾಧಾನ ವ್ಯಕ್ತಪಡಿಸಿದರು.

ಕ್ರೀಡಾ ಪ್ರೋತ್ಸಾಹಧನ

ಆರೋಗ್ಯ ಇಲಾಖೆ ಸಿಚ್‌ಒ, ಪೊಲೀಸ್ ಸಹಾಯಕ ಸಬ್ ಇನ್‌ಸ್ಪೆೆಕ್ಟರ್, ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿ ನೀಡಿದರು. ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಸಾಧಕ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರೋತ್ಸಾಹಧನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net