ಕೆ.ಎಚ್. ಪಾಟೀಲ್ ಕಾಲೇಜಿನಲ್ಲಿ ಶಿಷ್ಯವೇತನ ಪರೀಕ್ಷೆ

Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಕೆ.ಎಚ್. ಪಾಟೀಲ್ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗ್ರಾಮೀಣ ಮತ್ತು ನಗರದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಕಲಿಕೆಗೆ ನೆರವು ನೀಡುವ ದೃಷ್ಟಿಯಿಂದ ಶಿಷ್ಯವೇತನ ಪರೀಕ್ಷೆಯನ್ನು ಏ. 6ರಂದು ಬೆಳಗ್ಗೆ 10ರಿಂದ ಎರಡು ಅವಧಿಯಲ್ಲಿ ಏರ್ಪಡಿಸಲಾಗಿದೆ.

ಈ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶುಲ್ಕ ಹಣದಲ್ಲಿ ಸಂಪೂರ್ಣ ಕಡಿತಗೊಳಿಸಿ ಉಚಿತ ಶಿಕ್ಷಣ ನೀಡುವುದು ಮತ್ತು ಶೇ. 80ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶೇ. 50ರಷ್ಟು ರಿಯಾಯಿತಿ ನೀಡುವುದು ಮತ್ತು ಪರೀಕ್ಷೆಗೆ ಹಾಜರಾದ ಎಲ್ಲರಿಗೆ 25ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

ಅಲ್ಲದೆ ಸಮಾಜದ ಸ್ವಾಸ್ಥ್ಯ ಕಾಪಾಡುವ ಪೊಲೀಸರ ಮಕ್ಕಳು ಮತ್ತು ಯೋಧರ ಮಕ್ಕಳಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.

ಉತ್ತರ ಕರ್ನಾಟಕದ ಶೈಕ್ಷಣಿಕ ಅಭಿವೃದ್ಧಿಯ ಹಿತದೃಷ್ಟಿಯಿಂದ ವೇಮನ ವಿದ್ಯಾವರ್ಧಕ ಸಂಘವನ್ನು 1953ರಲ್ಲಿ ಕೆ.ಎಚ್. ಪಾಟೀಲರು ಪ್ರಾರಂಭಿಸಿದರು. ಇದರ ಅಡಿಯಲ್ಲಿ ಕೆ.ಎಚ್. ಪಾಟೀಲ್ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ ಕಾರ್ಯನಿರ್ವಹಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net