ಕುದ್ರೋಳಿಯಲ್ಲಿ 38 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ

mng-jan2-kudroli2
Published on

ಮಂಗಳೂರು: ಶ್ರೀ ಗುರು ಚಾರಿಟೆಬಲ್ ಟ್ರಸ್ಟ್ ಮಂಗಳೂರು ನೇತೃತ್ವದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಬಿಲ್ಲವಾಸ್ ದುಬೈ ಮತ್ತು ಎನ್‌ಇ ಚಾರಿಟೆಬಲ್ ಟ್ರಸ್ಟ್, ಒಮಾನ್ ಬಿಲ್ಲವಾಸ್, ಕುವೈತ್ ಬಿಲ್ಲವ ಸಂಘ, ಮೂಲ್ಕಿ ಯಲ್ಲಪ್ಪ ಸುವರ್ಣ - ಲೀಲಾವತಿ ಯಲ್ಲಪ್ಪ ಸುವರ್ಣ ಫೌಂಡೇಶನ್, ಕೊರಗಪ್ಪ - ಸೋಮಶೇಖರ್ ಶಿಷ್ಯವೇತನ ನಿಧಿ, ಗುರು ಬೆಳದಿಂಗಳು ಕುದ್ರೋಳಿ ಸಹಯೊಗದಲ್ಲಿ ಭಾನುವಾರ ಕುದ್ರೋಳಿ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ 38 ಲಕ್ಷ ರೂ ಮೊತ್ತದ ಸ್ಕಾಲರ್‌ಶಿಪ್ ವಿತರಿಸಲಾಯಿತು. 440 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದರು. ಇದೇ ವೇಳೆ ಬಿಲ್ಲವಾಸ್ ದುಬೈ ಮತ್ತು ನಾರ್ಥನ್ ಎಮಿರೇಟ್ಸ್ ವತಿಯಿಂದ ವೈದ್ಯಕೀಯ ನೆರವು ವಿತರಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಪ್ರಾಧ್ಯಾಪಕ ಅರುಣ್‌ ಉಳ್ಳಾಲ್‌, ಸ್ಕಾಲರ್‌ಶಿಪ್ ಎನ್ನುವುದು ಒಂದು ಋಣವಿದ್ದಂತೆ. ಅದನ್ನು ಹೇಗೆ ಸಂದಾಯ ಮಾಡುವುದು ಎಂದರೆ, ಕಲಿಕಾ ಅವಧಿಯಲ್ಲಿ ಕುದ್ರೊಳಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಂದು ಭಾಗವಹಿಸುವುದು. ಮುಂದಕ್ಕೆ ಉದ್ಯೋಗ ಪಡೆದ ಬಳಿಕ ದುಡಿದ ಮೊತ್ತದಲ್ಲಿ ಒಂದಂಶವನ್ನು ಮತ್ತೆ ಹಿಂದಿರುಗಿಸಬೇಕು. ಆಗ ಪಡೆದ ಸಹಾಯಕ್ಕೆ ಸಾರ್ಥಕತೆ ಲಭಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಸಾಯಿರಾಂ ಉದ್ಘಾಟಿಸಿ, ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮುಂದೆ ಬರಲು ಧನ ಸಹಾಯ ಮಾಡುವುದರಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಆಶೀರ್ವಾದ ಸದಾ ಇರುತ್ತದೆ ಎಂದರು.
ದೇವಳದ ಟ್ರಸ್ಟಿ ಎಂ.ಶೇಖರ ಪೂಜಾರಿ, ಗುರು ಬೆಳದಿಂಗಳು ಅಧ್ಯಕ್ಷ ಪದ್ಮರಾಜ್ ಆರ್., ಬಿಲ್ಲವಾಸ್ ದುಬೈ ಅಧ್ಯಕ್ಷ ಪ್ರಭಾಕರ ಸುವರ್ಣ, ಲೀಲಾವತಿ ಯಲ್ಲಪ್ಪ ಸುವರ್ಣ ಪ್ರತಿಷ್ಠಾನದ ಪ್ರಮುಖರಾದ ರೋಹಿತ್ ಸನಿಲ್, ಎಸ್‌ಆರ್‌ಆರ್ ಇಂಡಸ್ಟ್ರೀಸ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಶೈಲೇಂದ್ರ ವೈ. ಸುವರ್ಣ, ಒಮಾನ್ ಬಿಲ್ಲವಾಸ್ ಸದಸ್ಯರಾದ ಹರೀಶ್ ಸುವರ್ಣ, ಕೃಷ್ಣ ಪ್ರಸಾದ್ ಅಮೀನ್, ಕುವೈತ್ ಬಿಲ್ಲವ ವೆಲ್ಫೇರ್ ಅಧಿಕಾರಿ ಪ್ರಭಾಕರ್, ಸೌದಿ ಅರೇಬಿಯಾ ಬಿಲ್ಲವಾಸ್‌ನ ಜಗದೀಶ್ ಸಾಲ್ಯಾನ್, ಕೃಷ್ಣ ವಿಠಲ್ ಪೂಜಾರಿ, ಗುರು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಯಾನಂದ ಎಂ. ಮೊದಲಾದವರು ಉಪಸ್ಥಿತರಿದ್ದರು.
ಚಂದ್ರ ಶೇಖರ ಸುವರ್ಣ ಮೂಲ್ಕಿ ಅವರು ಸ್ಥಾಪಕ ಟ್ರಸ್ಟಿ ದಿ.ಗಣೇಶ್ ಬಂಗೇರ ಅವರಿಗೆ ನುಡಿನಮನ ಸಲ್ಲಿಸಿದರು. ಚಂದ್ರಶೇಖರ ನಾನಿಲ್ ಸುರತ್ಕಲ್ ಸ್ವಾಗತಿಸಿ, ಪ್ರಸ್ತಾವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net