ವಿದ್ವಾನ್ ಡಾ. ರಾ. ವಿಶ್ವೇಶ್ವರನ್‌ಗೆ ‘ವೀಣಾ ವಾಗ್ಗೇಯ ವಿಭೂಷಣ’ ಪ್ರಶಸ್ತಿ ಪ್ರದಾನ

Scholar Dr. R. Visweswaran was awarded 'Veena Vaggeya Vibhushan'
Published on

ಮೈಸೂರು: ಕಲಾಸಂದೇಶ ಪ್ರತಿಷ್ಠಾನ ವತಿಯಿಂದ ಕುವೆಂಪುನಗರದ ಗಾನಭಾರತೀ ರಮಾಬಾಯಿ ಗೋವಿಂದರಾವ್ ರಂಗಮಂದಿರದಲ್ಲಿ ಶುಕ್ರವಾರ ವೈಣಿಕ ವಿದ್ವಾನ್ ಡಾ. ರಾ. ವಿಶ್ವೇಶ್ವರನ್ ಅವರಿಗೆ ‘ವೀಣಾ ವಾಗ್ಗೇಯ ವಿಭೂಷಣ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಮೃದಂಗ ವಿದ್ವಾಂಸ ಆನೂರು ಅನಂತಕೃಷ್ಣ ಮಾತನಾಡಿ, ಕೋಲ್ಕತ್ತಾ ವೀಣೆ ತಯಾರಿಕಾ ಕಾರ್ಖಾನೆಯಾದರೆ ಮೈಸೂರು ವೈಣಿಕರನ್ನು ತಯಾರಿಸುವ ಕಾರ್ಖಾನೆಯಾಗಿದೆ. ಮೈಸೂರಿನಲ್ಲಿ ಹಲವಾರು ಅತ್ಯುತ್ತಮ ವೈಣಿಕರು ಇದ್ದಾರೆ. ಮೈಸೂರಿನವರಾದ ವೈಣಿಕ ಡಾ.ರಾ. ವಿಶ್ವೇಶ್ವರನ್ ನುಡಿಸುವ ವೀಣಾವಾದನ ಕೇಳೋದೇ ಮನಸ್ಸಿಗೆ ಒಂದು ರೀತಿಯ ಆನಂದ. ಅವರು ವೀಣೆ ನುಡಿಸುವಾಗ ತಮ್ಮನ್ನು ತಾವೇ ಮರೆಯುತ್ತಾರೆ. ಅಷ್ಟೊಂದು ತನ್ಮತೆಯಿಂದ ಅವರು ನುಡಿಸುತ್ತಾರೆ. 94ರ ಇಳಿ ವಯಸ್ಸಿನಲ್ಲೂ ಅವರು ವೀಣಾವಾದನ ನಡೆಸಿಕೊಡುತ್ತಿರುವುದು ಅವರಿಗೆ ವೀಣಾವಾದನ ಕಡೆಗೆ ಇರುವ ಪ್ರೀತಿಯನ್ನು ತೋರಿಸುತ್ತದೆ ಎಂದರು.

ಭರತನಾಟ್ಯ ವಿದ್ವಾಂಸ ರಾಮಮೂರ್ತಿ ರಾವ್ ಮಾತನಾಡಿ, ಮೈಸೂರು ವೀಳ್ಯದೆಲೆ, ಮೈಸೂರು ಮಲ್ಲಿಗೆ ರೀತಿಯಲ್ಲಿಯೇ ಮೈಸೂರು ನಗರ ವೀಣಾವಾದನಕ್ಕೆ ಖ್ಯಾತಿಯನ್ನು ಹೊಂದಿದೆ. ಡಾ. ರಾ. ವಿಶ್ವೇಶ್ವರನ್ ಮೈಸೂರಿನಲ್ಲಿ ವೀಣಾವಾದನದ ಬೆಡಗು ಹೆಚ್ಚಿಸಿದ್ದಾರೆ ಎಂದು ಹೇಳಿದರು.

ಪ್ರಸ್ತುತ ಎಲ್ಲರು ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆಗೆ ಮುಖ ಮಾಡುತ್ತಿರುವ ಹೊತ್ತಿನಲ್ಲಿ ಭಾರತೀಯರನ್ನು ಭಾರತೀಯ ಸಂಸ್ಕೃತಿಯತ್ತ ಕರೆತರುವ ಕಾರ್ಯವನ್ನು ಕಲಾಸಂದೇಶ ಪ್ರತಿಷ್ಠಾನ ನಡೆಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಕರ್ನಾಟಕ ಸಂಗೀತ ವಿದ್ವಾಂಸರಾದ ಡಾ.ರಾ.ಸ. ನಂದಕುಮಾರ್, ಎಚ್.ಕೆ. ನರಸಿಂಹಮೂರ್ತಿ, ಎ.ಪಿ. ಶ್ರೀನಿವಾಸ್, ಮೃದಂಗ ವಿದ್ವಾಂಸರಾದ ಎಚ್.ಎಲ್. ಶಿವಶಂಕರಸ್ವಾಮಿ, ಜಿ.ಎಸ್. ರಾಮಾನುಜಂ, ಭರತನಾಟ್ಯ ವಿದ್ವಾಂಸರಾದ ಡಾ. ವಸುಂಧರಾ ದೊರೆಸ್ವಾಮಿ, ಡಾ.ತುಳಸಿ ರಾಮಚಂದ್ರ, ಡಾ.ಶೀಲಾ ಶ್ರೀಧರ್, ಆರ್. ಕಣ್ಣನ್, ಡಾ.ಕೃಪಾ ಫಡ್ಕೆ, ಡಾ.ರಾಧಿಕಾ ನಂದಕುಮಾರ್, ಸಾಹಿತಿಗಳಾದ ಡಾ.ಜ್ಯೋತಿ ಶಂಕರ್, ಡಾ.ರಮಾ ವಿ. ಬೆಣ್ಣೂರು, ವೀಣಾ ವಿದ್ವಾಂಸ ಆರ್.ಕೆ. ಪದ್ಮನಾಭ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net