ಡಾ. ಬಿ.ಗೋಪಾಲ ಆಚಾರ್ಯಗೆ 'ಪ್ರಾಚ್ಯವಿದ್ಯಾ ವಿಶಾರದ' ಪ್ರಶಸ್ತಿ...

Sanmaana
Published on

ಪುರಿ ಕ್ಷೇತ್ರದಲ್ಲಿ ನಡೆದ ಅಂತಾರಾಷ್ಟ್ರೀಯ ಸಂಸ್ಕೃತ ಸಮ್ಮೇಳನದಲ್ಲಿ ಪ್ರದಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ಒರಿಸ್ಸಾದ ಪುರಿ ಕ್ಷೇತ್ರದಲ್ಲಿ ಭಾರತ ಸರ್ಕಾರದ ಅಧೀನದಲ್ಲಿರುವ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ನವದೆಹಲಿ ಹಾಗೂ ಲೋಕಭಾಷಾ ಪ್ರಚಾರ ಸಮಿತಿ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಮೂರು ದಿನದ ಅಂತಾರಾಷ್ಟ್ರೀಯ ಸಂಸ್ಕೃತ ಸಮ್ಮೇಳನದಲ್ಲಿ ವಿದ್ವಾನ್​ ಡಾ. ಬಿ.ಗೋಪಾಲ ಆಚಾರ್ಯ ಅವರಿಗೆ ಪ್ರಾಚ್ಯವಿದ್ಯಾ ವಿಶಾರದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಉಡುಪಿಯ ಪುತ್ತಿಗೆ ಮಠದ ಅಧೀನದಲ್ಲಿರುವ ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕರಾದ ಡಾ. ಬಿ.ಗೋಪಾಲ ಆಚಾರ್ಯ, ಪ್ರಾಚೀನ ಗ್ರಂಥಗಳ ಸಂರಕ್ಷಣೆ ಮತ್ತು ಸಂಶೋಧನಾ ಕಾರ್ಯದಲ್ಲಿ ನಿರಂತರ ಶ್ರಮ ವಹಿಸುತ್ತಿದ್ದಾರೆ. ಅಲ್ಲದೆ, ಪ್ರತಿಷ್ಠಾನದಿಂದ ವಿಶೇಷ ಯೋಜನೆಯನ್ನೂ ಹಮ್ಮಿಕೊಂಡಿದ್ದಾರೆ. ಅದರ ಭಾಗವಾಗಿ ದೇಶದ ವಿವಿಧ ಭಾಗಗಳಲ್ಲಿ ಗ್ರಂಥ ಸಂರಕ್ಷಣೆ ಮತ್ತು ಪ್ರಾಚೀನ ಇತಿಹಾಸಗಳ ಅನ್ವೇಷಣೆ ಕಾರ್ಯದಲ್ಲಿ ನಿರತರಾಗಿದ್ದು, ಈ ಸಾಧನೆಗಾಗಿ ಪ್ರಶಸ್ತಿ ನೀಡಲಾಗಿದೆ.

ಸಮಾರಂಭದಲ್ಲಿ ಒರಿಸ್ಸಾದ ಪ್ರಸಿದ್ಧ ಸಂಸ್ಕೃತ ಸಂಶೋಧಕ ವಿದ್ವಾಂಸ ಡಾ.ವಿಪಿನ ವಿಹಾರೀ ಶತಪಥೀ, ಲೋಕ ಭಾಷಾ ಪ್ರಚಾರ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಪ್ರೊ. ಸದಾನಂದ ದೀಕ್ಷಿತ, ನೇಪಾಳ ಸಂಸತ ವಿವಿಯ ವಿಭಾಗ ಮುಖಸ್ಥ ಡಾ. ಕಾಶೀನಾಥ ನ್ಯೌಪಾನೇ, ಅಸ್ಸಾಂನ ಕುಮಾರಭಾಸ್ಕರ ವಮಾರ್, ಸಂಸ್ಕೃತ ವಿವಿಯ ವಿಭಾಗ ಮುಖಸ್ಥ ಡಾ. ಗೋಕುಲೇಂದ್ರ ನಾರಾಯಣದೇವ ಗೋಸ್ವಾಮಿ, ಉತ್ಕಲ ಪ್ರಾಂತ್ಯದ ಪ್ರಸಿದ್ಧ ಸಂಸ್ಕೃತ ವಿದ್ವಾಂಸ ಪ್ರೊ. ಅರುಣ ತ್ರಿಪಾಠಿ, ಬಿಹಾರದ ಜಯಪ್ರಕಾಶ ನಾರಾಯಣ ವಿವಿಯ ಹಿರಿಯ ಸಂಸ್ಕೃತ ವಿದ್ವಾಂಸ ಪ್ರೊ. ವೈದ್ಯನಾಥ ಮಿಶ್ರಾ ಉಪಸ್ಥಿತರಿದ್ದರು.

ಸಮ್ಮೇಳನದಲ್ಲಿ ದೇಶ-ವಿದೇಶಗಳ 300ಕ್ಕೂ ಅಧಿಕ ಸಂಸ್ಕೃತ ವಿದ್ವಾಂಸರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net