ರೈತರಿಗೆ ನೀರಾವರಿ ಸೌಕರ್ಯ ಕಲ್ಪಿಸಲು ಯೋಜನೆ

29 HANUR 2
ಹುಬ್ಬೆಹುಣಸೆ ಡ್ಯಾಂಗೆ ಶಾಸಕ ಎಂ.ಆರ್ ಮಂಜುನಾಥ್ ಬಾಗಿನ ಅರ್ಪಿಸಿದರು. ಗುರುಮಲ್ಲಪ್ಪ, ಮಂಜೇಶ್, ರಾಜುಗೌಡ, ಜಸ್ಸೀಪಾಷ ಇತರರು ಇದ್ದರು.
Published on

ಹನೂರು : ಕ್ಷೇತ್ರ ವ್ಯಾಪ್ತಿಯ ರೈತರಿಗೆ ಉತ್ತಮ ನೀರಾವರಿ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದ್ದು, ಹಂತಹಂತವಾಗಿ ಕಾರ್ಯರೂಪಕ್ಕೆ ಬರಲಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ಪಟ್ಟಣ ಸಮೀಪದ ಉದ್ದನೂರು ಬಳಿಯ ಹುಬ್ಬೆಹುಣಸೆ ಡ್ಯಾಂ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಗುರುವಾರ ಕಾರ್ಯಕರ್ತರು, ಮುಖಂಡರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಬಾಗಿನ ಅರ್ಪಿಸಿ ಮಾತನಾಡಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ರೈತರು ಕೃಷಿಯನ್ನು ಅವಲಂಬಿಸಿದ್ದು, ಜೀವನ ನಡೆಸುತ್ತಿದ್ದಾರೆ. ಆದರೆ ಸಮರ್ಪಕ ನೀರಾವರಿ ಸೌಕರ್ಯ ಇಲ್ಲದ ಪರಿಣಾಮ ಕೃಷಿಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಈ ದಿಸೆಯಲ್ಲಿ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಈ ಸಂಬಂಧ ಸರ್ಕಾರದ ಗಮನಕ್ಕೆ ತರಲಾಗಿದೆ. ಕಳೆದ ವರ್ಷ ಮಳೆಯಿಲ್ಲದ ಪರಿಣಾಮ ಕೆಲವು ಡ್ಯಾಂಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತಲ್ಲದೇ ಇನ್ನು ಕೆಲವು ಡ್ಯಾಂಗಳು ಬತ್ತಿ ಹೋಗಿದ್ದವು. ಆದರೆ ಕ್ಷೇತ್ರದ ಆರಾದ್ಯ ದೈವ ಶ್ರೀ ಮಹದೇಶ್ವರರ ಕೃಪೆಯಿಂದ ಈ ಬಾರಿ ಉತ್ತಮ ಮಳೆಯಾಗಿದ್ದು, ಕೆರೆ ಕಟ್ಟೆಗಳು ನೀರು ಸಂಗ್ರಹವಾಗಿರುವುದರ ಜತೆಗೆ ಕೆಲವು ಡ್ಯಾಂಗಳು ಭರ್ತಿಯಾಗಿವೆ. ಪ್ರತಿ ವರ್ಷ ಉತ್ತಮ ಮಳೆಬೆಳೆಯಾಗಲೆಂದು ಆಶಿಸಿದರು.
ನೀರು ವ್ಯರ್ಥವಾಗದಂತೆ ಕ್ರಮ: ಕ್ಷೇತ್ರ ವ್ಯಾಪ್ರಿಯ ರಾಮನಗುಡ್ಡೆ ಹಾಗೂ ಹುಬ್ಬೆಹುಣಸೆ ಡ್ಯಾಂ ಪೈಪ್‌ಲೈನ್ ಕಾಮಗಾರಿ ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿದೆ. ಈ ಸಂಬಂಧ ಸರ್ಕಾರದ ಗಮನಕ್ಕೆ ತರಲಾಗಿದ್ದು, ಅನುದಾನ ಬಿಡುಗಡೆಯಾದ ಬಳಿಕ ಕಾಮಗಾರಿಯನ್ನು ಪೂರ್ಣಗೊಳಿಸಿ ಡ್ಯಾಂಗಳಿಗೆ ನೀರು ತುಂಬಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು. ಇನ್ನು ಕೆಲವು ಡ್ಯಾಂಗಳಿಗೆ ನೀರು ತುಂಬಿಸಲು ಈ ಹಿಂದೆ ಡಿಪಿಆರ್ ತಯಾರಿಸಲಾಗಿತ್ತು. ಆದರೆ ಅನುದಾನದ ಕೊರತೆಯಿಂದ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಇದೀಗ ಈ ಬಗ್ಗೆ ಅಗತ್ಯ ಕ್ರಮವಹಿಸಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಿಯೂ ನೀರು ವ್ಯಥವಾಗದಂತೆ ಯೋಜನೆಯನ್ನು ಸಹ ರೂಪಿಸಲಾಗಿದೆ. ಜತೆಗೆ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಲಸ ಕಾರ್ಯಗಳಾಗಲಿದೆ ಎಂದರು.

ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಪಪಂ ಸದಸ್ಯ ಆನಂದ್‌ಕುಮಾರ್, ನೀರಾವರಿ ಇಲಾಖೆಯ ಇಂಜಿನಿಯರ್‌ಗಳಾದ ರಮೇಶ್, ರಾಮಕೃಷ್ಣ, ಮುಖಂಡರಾದ ರಾಜುಗೌಡ, ಮಂಜೇಶ್, ಶಿವಮೂರ್ತಿ, ರಾಹಿಲ್, ಜಸ್ಸೀಂಪಾಷ, ಗಿರೀಶ್, ಪ್ರಮೋದ್, ಸೈಯದ್ ರಖೀಬ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net