

ಹುನಗುಂದ: ಬೀದಿ ಬದಿಯಲ್ಲಿ ವ್ಯಾಪಾರ ನಡೆಸುವ ಕುಟುಂಬಗಳ ಆರ್ಥಿಕ ಅಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಿಧ ಸಾಲ ಸೌಲಭ್ಯ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ ಹೇಳಿದರು.
ಪಟ್ಟಣದ ಪುರಸಭೆ ಭವನದಲ್ಲಿ ಜಿಲ್ಲಾಡಳಿತ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಪುರಸಭೆ ಕಾರ್ಯಾಲಯ ಹಾಗೂ ಜಾಗೃತಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಿಎಂ ಸ್ವನಿಧಿ ಶಿಬಿರ ಹಾಗೂ 8 ಕಲ್ಯಾಣ ಯೋಜನೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾಗೃತಿ ಗ್ರಾಮೀಣಾಭಿವೃದ್ಧಿ ಅಧ್ಯಕ್ಷ ಅಮರೇಶ ನಾಗೂರ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಿಗೆ ನೆರವು ನೀಡಲು ಪ್ರಧಾನಮಂತ್ರಿ ಜೀವನ್ ಜ್ಯೋತಿ, ಸುರಕ್ಷಾ ಬೀಮಾ, ಶ್ರಮಯೋಗಿ ಧನ ಯೋಜನೆ, ಒನ್ ನೇಷನ್ ಒನ್ ರೇಷನ್ ಕಾರ್ಡ್, ಪ್ರಧಾನಮಂತ್ರಿ ಜನಧನ್ ಯೋಜನೆ, ಲೇಬರ್ ಕಾರ್ಡ್, ಜನನಿ ಸುರಕ್ಷಾ ಯೋಜನೆ, ಪ್ರಧಾನಮಂತ್ರಿ ಮಾತೃ ವಂದಾನ ಯೋಜನೆ, ಪಿಎಂ ಸ್ವನಿಧಿ ಯೋಜನೆ ಸೇರಿದಂತೆ ಅನೇಕ ಯೋಜನೆ ಜಾರಿಗೊಳಿಸಲಾಗಿದೆ. ಪಾರಂಪರಿಕವಾಗಿ ವ್ಯಾಪಾರವನ್ನೇ ನಂಬಿ ಜೀವನ ಸಾಗಿಸುತ್ತಿರುವ ಕುಟುಂಬಗಳ ಆರ್ಥಿಕ ಅಭಿವೃದ್ಧಿಗೆ ಇದು ಪೂರಕವಾಗಲಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಉಪನ್ಯಾಸಕ ಎಸ್.ವಿ. ಬ್ಯಾಡನ್‌ನವರ ಮಾತನಾಡಿದರು. ಹರ್ಷದ್ ನಾಯಕ, ಮುತ್ತಣ್ಣ ಗಂಜೀಹಾಳ, ಪುರಸಭೆ ಅಧಿಕಾರಿಗಳಾದ ಎಂ.ಎಸ್. ಲಮಾಣಿ, ಶ್ಯಾಮಸುಂದರ, ಇಬ್ರಾಹಿಂ ಗುಡ್ಡದ, ಡಾ. ಬಾಷಾ ಹವಾಲ್ದಾರ, ಡಾ. ಜಗದೀಶ ಹಿರೇಮಠ, ಪ್ರವೀಣ ಚೂರಿ ಮತ್ತಿತರರಿದ್ದರು. ಬೀದಿ ಬದಿ ವ್ಯಾಪಾರಿಗಳಿಗೆ ಆರೋಗ್ಯ ಉಚಿತ ತಪಾಸಣೆ ನಡೆಯಿತು.