ನಾಗಮೋಹನ್‌ದಾಸ್ ವರದಿ ರದ್ದುಗೊಳಿಸಲು ಆಗ್ರಹ: ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಒಳ ಮೀಸಲಾತಿ ರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ

Scheduled Caste Right-handed Community Internal Reservation Protection Committee Protest Mandya
Published on

ಮಂಡ್ಯ: ನ್ಯಾಯಮೂರ್ತಿ ಡಾ.ನಾಗಮೋಹನ್‌ದಾಸ್ ಅಧ್ಯಕ್ಷತೆಯ ಒಳ ಮೀಸಲಾತಿ ವಿಚಾರಣಾ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಭಾರೀ ಅನ್ಯಾಯವಾಗಿದೆ. ಆದ್ದರಿಂದ ವರದಿಯನ್ನು ರದ್ಧು ಮಾಡಬೇಕೆಂದು ಆಗ್ರಹಿಸಿ ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಒಳ ಮೀಸಲಾತಿ ರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿ, ನ್ಯಾಯಮೂರ್ತಿ ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿದ ಪರೈಯ್ಯ, ಪರವನ್ ಜಾತಿಯನ್ನು ಎಡಗೈ ಪಂಗಡಕ್ಕೆ ಸೇರಿಸಿರುವುದಲ್ಲದೆ, ಬಲಗೈ ಸಮುದಾಯಕ್ಕೆ ಸೇರಿದ ಇನ್ನೂ ಹಲವು ಜಾತಿಗಳನ್ನು ಅತ್ಯಂತ ಹಿಂದುಳಿದ ಜಾತಿಗಳ ಗುಂಪಿಗೆ ಸೇರಿಸಿ ಬಲಗೈ ಸಮುದಾಯದ ಜನ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಲಾಗಿದೆ. ಆದಿಕರ್ನಾಟಕ, ಆದಿದ್ರಾವಿಡ, ಆದಿಆಂಧ್ರ ಸಮೂಹಕ್ಕೆ ಶೇ.1 ರಷ್ಟು ಮೀಸಲಾತಿ ನಿಗದಿಪಡಿಸಿರುವುದಲ್ಲದೆ, ಬಲಗೈಗೆ ಸೇರಿದ ಇನ್ನೂ ಹಲವು ಜಾತಿಗಳನ್ನು ಹಿಂದುಳಿದ ಜಾತಿಗಳ ಗುಂಪಿಗೆ ಸೇರಿಸಿ ಉದ್ದೇಶಪೂರ್ವಕವಾಗಿ ಸಮುದಾಯದ ಸಂಖ್ಯೆಯನ್ನು ಹೆಚ್ಚು ಮಾಡಲಾಗಿದೆ ಎಂದು ಆರೋಪಿಸಿದರು.

ಬೆಂಗಳೂರು, ಮೈಸೂರು, ರಾಯಚೂರು, ಶಿವಮೊಗ್ಗ, ಬಳ್ಳಾರಿ ಮುಂತಾದ ಜಿಲ್ಲೆಗಳಲ್ಲಿರುವ ಪಠ್ಯಯ್ಯ, ಪರವನ್ ಸಮುದಾಯವನ್ನು ಛಲವಾದಿ ಸಮುದಾಯದ ಬದಲು ಮಾದಿಗ ಸಮುದಾಯಕ್ಕೆ ಸೇರಿಸಿ ಬಲಗೈ/ಛಲವಾದಿ ಸಮುದಾಯದ ಜನಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿ ನಮೂದಿಸಿರುತ್ತಾರೆ. ಇದೇ ರೀತಿ ಮುಂಡಾಲ ಜಾತಿಯನ್ನು ಶೇ.1ರಷ್ಟರ ಗುಂಪಿಗೆ ಸೇರಿದೆ ಎಂದು ತಿಳಿದು ಬಂದಿರುತ್ತದೆ. ಅಲ್ಲದೆ, ಸಮೀಕ್ಷೆಯಲ್ಲಿ ತಾಂತ್ರಿಕ ದೋಷ ಇರುವುದರಿಂದ ಮತ್ತು ಮೀಸಲಾತಿ ಹಂಚಿಕೆಗೆ ಸಚಿವ ಸಂಪುಟದ ಉಪ ಸಮಿತಿ ರಚಿಸಿ ಸಮೀಕ್ಷೆ ಮರುಪರಿಶೀಲನೆ ಮಾಡಿ ಬಲಗೈ ಸಮುದಾಯಕ್ಕೆ ನ್ಯಾಯ ದೊರಕಿಸಿ ಕೊಡಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರದಲ್ಲಿರುವ ಛಲವಾದಿ ಸಮುದಾಯದ ಸಚಿವರು ನಿದ್ರೆಯಿಂದ ಎದ್ದು ಸಮೀಕ್ಷೆ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಸಮೀಕ್ಷೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ. ರಾಜ್ಯದಲ್ಲಿ ಛಲವಾದಿ ಸಮುದಾಯ ಹೆಚ್ಚಿದ್ದರೂ ಒಳ ಮೀಸಲಾತಿ ನೀಡುವಲ್ಲಿ ಸಮುದಾಯಕ್ಕೆ ಮೋಸ ಎಸಗಲಾಗಿದೆ. ಮುಖ್ಯಮಂತ್ರಿಗಳು ಮರು ಪರಿಶೀಲನೆ ನೆಡಸಿ ಪ.ಜಾತಿ ಬಲಗೈ ಸಮುದಾಯಕ್ಕೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಭದ್ರತೆಗೆ ಸಹಕರಿಸಬೇಕೆಂದು ಆಗ್ರಹಿಸಿದರು.

ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರ ಆಯೋಗದ ವರದಿಯಲ್ಲಿರುವ ಆಗಿರುವ ತಪ್ಪುಗಳನ್ನು ಸಮಗ್ರವಾಗಿ ಪರಿಶೀಲಿಸಿ ಪರಿಷ್ಕರಣೆ ಮಾಡಲು ಇಬ್ಬರು ಶಾಸ್ತ್ರಜ್ಞರುಗಳನ್ನೊಳಗೊಂಡಂತೆ ಸಚಿವ ಸಂಪುಟದ ಉಪ ಸಮಿತಿ ರಚಿಸಿ, ಉಪಸಮಿತಿಯ ಶಿಫಾರಸಿನಂತೆ ಒಳಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಗುರುಪ್ರಸಾದ್ ಕೆರಗೋಡು, ಸುಂಡಹಳ್ಳಿ ಮಂಜುನಾಥ್, ವಿಜಯಲಕ್ಷ್ಮೀ ರಘುನಂದನ್, ಶ್ರೀಧರ್, ವಿಜಯ್‌ಕುಮಾರ್ ಚಂದಗಾಲು, ಕೆ.ಎನ್.ದೀಪಕ್, ಎಂ.ಎಲ್. ತುಳಸೀಧರ್, ಆನಂದ್ ಕುಮಾರ್ ಚಿಕ್ಕಮಂಡ್ಯ, ಸಾತನೂರು ಜಯರಾಮು, ಗಂಗರಾಜು, ಜೆ.ರಾಮಯ್ಯ, ನಾರಾಯಣಸ್ವಾಮಿ, ಹುರುಗಲವಾಡಿ ರಾಮಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net