ಒಳಮೀಸಲಾತಿ ಬಗ್ಗೆ ಬಿಜೆಪಿಯಿಂದ ತಪ್ಪು ಮಾಹಿತಿ

Sudhama Das
ಸುಧಾಮ ದಾಸ್
Published on

ರಾಯಚೂರು: ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಕುರಿತು ಬಿಜೆಪಿ ನಾಯಕರು ಸುಳ್ಳು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಪರ ಪ್ರಚಾರಕ್ಕಿಂತ ಒಳಮೀಸಲಾತಿ ಬಗ್ಗೆ ಜನರಿಗೆ ಮನವರಿಕೆ ಮಾಡುವುದರಲ್ಲಿಯೇ ಸಮಯ ಕಳೆಯುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷ ಸುಧಾಮ ದಾಸ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದರು. ಒಳ ಮೀಸಲಾತಿ ಜಾರಿಗೊಳಿಸಲಾಗಿದೆ ಎಂದು ಬಿಜೆಪಿ ನಾಯಕರು ಸುಳ್ಳು ಪ್ರಚಾರ ನಡೆಸುತ್ತಿದ್ದು, ಡಬಲ್ ಇಂಜಿನ್ ಸರ್ಕಾರಕ್ಕೆ ಒಳ ಮೀಸಲಾತಿ ಜಾರಿಗೊಳಿಸುವ ಆಸಕ್ತಿಯಿಲ್ಲ. ರೋಡ್ ಶೋ ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹುದ್ದೆಯ ಗಂಭೀರತೆಯನ್ನು ಕಳೆಯುತ್ತಿದ್ದಾರೆ. ಜನರ ತೆರಿಗೆ ಹಣದಲ್ಲಿ ಪ್ರಚಾರ ನಡೆಸುತ್ತಿರುವ ಪ್ರಧಾನಿ, ಇಡಬ್ಲುೃಎಸ್ ಮೀಸಲಾತಿ ಘೋಷಿಸುವಲ್ಲಿ ತೋರಿದ ಆಸಕ್ತಿಯನ್ನು ಒಳ ಮೀಸಲಾತಿ ಜಾರಿಗೆ ತೋರುತ್ತಿಲ್ಲ ಎಂದು ದೂರಿದರು.
ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿಗೊಳಿಸಲಾಗಿದೆ ಹೇಳುವ ಮೂಲಕ ಜನರಿಗೆ ಬಿಜೆಪಿ ದ್ರೋಹ ಎಸಗುತ್ತಿದೆ. ಈ ಕುರಿತು ರಾಜ್ಯಾದ್ಯಂತ ಪ್ರವಾಸ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲಾಗುವುದು. ಒಳ ಮೀಸಲಾತಿಗೆ ಸಂಬಂಧಿಸಿದಂತೆ ಪರಿಶಿಷ್ಟರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸುಧಾಮ ದಾಸ್ ಹೇಳಿದರು.
ಪ್ರಮುಖರಾದ ಅಂಬಣ್ಣ ಅರೋಲಿಕರ್, ಬಿ.ಗೋಪಾಲ, ಶ್ರೀನಿವಾಸ ಹೆಣ್ಣೂರು, ನರಸಿಂಹಲು ಮಾಡಗಿರಿ, ಈರಣ್ಣ ಭಂಡಾರಿ, ರವೀಂದ್ರನಾಥ, ಮರೀಶ ನಾಗಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net