ಪರಿಶಿಷ್ಟ ಜಾತಿ ಒಳ ಮೀಸಲಾತಿ, ಸರ್ವೇಗೆ ಸಿದ್ಧತೆ

23cbp5.jpg
Published on

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವಿಚಾರವಾಗಿ ಮೇ.5 ರಿಂದ ಮೇ.17 ರವರೆಗೆ 12 ದಿನಗಳ ಕಾಲ ಶಿಕ್ಷಕ ಗಣತಿದಾರರ ಮೂಲಕ ಮನೆ ಮನೆ ಸಮೀಕ್ಷೆ ಕೈಗೊಳ್ಳಲಾಗಿದೆ.
ಜಿಲ್ಲಾಡಳಿತ ಭವನ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಧ್ಯಕ್ಷತೆಯಲ್ಲಿ ಕೈಗೊಂಡಿದ್ದ ಪರಿಶಿಷ್ಟ ಜಾತಿಯ ಒಳ ಮಿಸಲಾತಿ ಸಮೀಕ್ಷೆಯ ಪೂರ್ವಸಿದ್ಧತಾ ಸಭೆಯಲ್ಲಿ ಸರ್ವೇ ಬಗ್ಗೆ ಚರ್ಚಿಸಲಾಯಿತು.
ಸರ್ಕಾರದಿಂದ ನೇಮಿಸಿರುವ ನ್ಯಾಯಮೂರ್ತಿ ಎಚ್.ಎನ್.ನಾಗ ಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗವು ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಸಂಗ್ರಹಿಸುತ್ತಿದೆ. ರಾಜ್ಯಾದ್ಯಂತ ಸಮೀಕ್ಷೆ ಕೈಗೊಂಡಿದೆ ಎಂದು ಡಿಸಿ ತಿಳಿಸಿದರು.
ಸಮೀಕ್ಷೆಗಾಗಿ ಜಿಲ್ಲೆಯಲ್ಲಿರುವ ಮತಗಟ್ಟೆಗೆ ಒಬ್ಬರಂತೆ ಗಣತಿದಾರರು, 10 ಜನ ಗಣತಿದಾರರಿಗೆ ಒಬ್ಬರಂತೆ ಮೇಲ್ವಿಚಾರಕ ಅಧಿಕಾರಿಯನ್ನು ನೇಮಿಸಲಾಗುತ್ತದೆ. ಇದಕ್ಕೆ ಬಿಎಲ್ಒ ಶಿಕ್ಷಕರನ್ನು ಮಾತ್ರವೇ ನೇಮಿಸಲಾಗುತ್ತದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಜವಾಬ್ದಾರಿ ಒಪ್ಪಿಸಲಾಗಲ್ಲ ಎಂದರು.
ಸಮೀಕ್ಷೆಯನ್ನು ಆಂಡ್ರಾಯ್ಡ್ ಮೊಬೈಲ್ ಮೂಲಕ ಆನ್ ಲೈನ್ ನಲ್ಲಿಯೇ ನಮೂದಿಸಲಾಗುತ್ತದೆ. ಪ್ರಶ್ನಾವಳಿ ಮೂಲಕ ಮಾಹಿತಿಯನ್ನು ಸವಿಸ್ತಾರವಾಗಿ ಸಂಗ್ರಹಿಸಲಿದ್ದು ಗಣತಿದಾರರಿಗೆ ಮೂವರು ಮಾಸ್ಟರ್ ತರಬೇತುದಾರರು ತರಬೇತಿ ನೀಡಲಿದ್ದಾರೆ ಎಂದರು.
ಮೇ.5 ರೊಳಗೆ ಸಮುದಾಯದ ಮುಖಂಡರ ಸಭೆ ಕೈಗೊಂಡು ಸಮೀಕ್ಷೆಯ ಮಹತ್ವವನ್ನು ತಿಳಿಸಬೇಕು. ಆಟೋಗಳು ಹಾಗೂ ಕಸ ಸಂಗ್ರಹ ವಾಹನಗಳ ಮೂಲಕ ರೇಡಿಯೋ ಜಿಂಗಲ್ ಗಳನ್ನು ಬಿತ್ತರಿಸಬೇಕು ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಜಿ.ಪಂ.ಸಿಇಒ ಅತಿಕ್ ಪಾಷಾ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ತೇಜಾನಂದ ರೆಡ್ಡಿ ಮತ್ತಿತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net