

ಮಂಡ್ಯ: ಅಲೆಮಾರಿ ಜನಾಂಗಕ್ಕೆ ನಿವೇಶನ ಮತ್ತು ಮನೆ ಸೌಲಭ್ಯ ಕಲ್ಪಿಸುವ ಮೂಲಕ ಟೆಂಟ್ ಮುಕ್ತ ಕರ್ನಾಟಕ ನಮ್ಮ ಗುರಿ ಎಂದು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ರಾಜ್ಯದಲ್ಲಿ ಅಲೆಮಾರಿ ಜನಾಂಗ ಇಂದಿಗೂ ನೆಲೆ ಮತ್ತು ಮೂಲಸೌಕರ್ಯವಿಲ್ಲದೆ ಪರದಾಡುತ್ತಿದೆ. ರಾಜ್ಯದ 14 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಲೆಮಾರಿ ಜನಾಂಗದ ಕುಂದು ಕೊರತೆ ಆಲಿಸಿದ್ದೇನೆ. ಉಳಿದ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ಮಾ.12ರೊಳಗೆ ಅಲೆಮಾರಿ ಜನಾಂಗದ ಸ್ಥಿತಿಗತಿ ಕುರಿತು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದು ಹೇಳಿದರು.
ಧ್ವನಿ ಇಲ್ಲದ, ಅವಕಾಶ ವಂಚಿತರಾದ ಅಲೆಮಾರಿಗಳ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ. ಅಹವಾಲುಗಳನ್ನು ಸ್ವೀಕರಿಸಿ ಕಾಲಮಿತಿಯಲ್ಲಿ ಪರಿಹಾರ ಕಲ್ಪಿಸಲು ಅಧಿಕಾರಿಗಳು ಮಾತೃ ಹೃದಯದಿಂದ ಕೆಲಸ ಮಾಡಲು ಸೂಚಿಸಿದ್ದೇನೆ. ಅಲೆಮಾರಿ ಜನಾಂಗದ ಮಕ್ಕಳಿಗೆ ಪ್ರವೇಶ ಪರೀಕ್ಷೆ ರಹಿತವಾಗಿ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಹಕ್ಕಿಪಿಕ್ಕಿ ಜನಾಂಗದ ಮೇಲಿನ ದೌರ್ಜನ್ಯ ಮತ್ತು ಬುಡಕಟ್ಟು ಜನರ ಹೆಸರಿನಲ್ಲಿ ಅನರ್ಹರು ಜಾತಿ ಪ್ರಮಾಣ ಪತ್ರ ಪಡೆಯುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪಾಂಡವಪುರ ಸೇರಿದಂತೆ ಕೆಲವು ಕಡೆ ಶವಸಂಸ್ಕಾರ ನಡೆಸಲು ಸ್ಮಶಾನಗಳ ಕೊರತೆ ಬಗ್ಗೆ ಅಹವಾಲು ಬಂದಿವೆ. ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದು ವಿವರಿಸಿದರು.