

ಮಂಡ್ಯ: ಜಿಲ್ಲೆಯ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 35 ಸದಸ್ಯ ಸ್ಥಾನಕ್ಕೆ ಉಪಚುನಾವಣೆ ಮಾಡಲು ವೇಳಾಪಟ್ಟಿ ಪ್ರಕಟಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶಿಸಿದ್ದಾರೆ.
ಅದರಂತೆ ನ.6ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು ನ.12 ಕೊನೇ ದಿನವಾಗಿದೆ. 13ರಂದು ಉಮೇದುವಾರಿಕೆ ಪರಿಶೀಲನೆ ಹಾಗೂ 15ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿರಲಿದೆ. ಮತದಾನದ ಅವಶ್ಯವಿದ್ದರೆ ನ.23ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5ರವರೆಗೆ ಮತದಾನ ನಡೆಸಲಾಗುವುದು. ನ.26ರಂದು ಬೆಳಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದೆ.
ಮಂಡ್ಯ ತಾಲೂಕಿನ ಕೆರಗೋಡು, ಕೀಲಾರ, ಹುಲಿವಾನ, ಯಲಿಯೂರು, ಮದ್ದೂರು ತಾಲೂಕಿನ ಅಡಗನಹಳ್ಳಿ, ವಳಗೆರೆಹಳ್ಳಿ ತೈಲೂರು, ಗೊರವನಹಳ್ಳಿ, ಶಿಂಘಟಗೆರೆ, ಕೆ.ಶೆಟ್ಟಿಹಳ್ಳಿ, ಮಳವಳ್ಳಿ ತಾಲೂಕಿನಲ್ಲಿ ಅಂಕನಹಳ್ಳಿ, ಹೊಸಹಳ್ಳಿ, ರಾಮನಾಥ ಮೋಳೆ, ಬೆಳಕವಾಡಿ, ಪಾಂಡವಪುರ ತಾಲೂಕಿನಲ್ಲಿ ಬೆಳ್ಳಾಳೆ, ವಳಗೆರೆದೇವರಹಳ್ಳಿ, ಹೊಸಹಳ್ಳಿ, ಕುರಹಟ್ಟಿ, ಬಸವನಗುಡಿಕೊಪ್ಪಲು, ಹೊಸಸಾಯಪ್ಪನಹಳ್ಳಿ, ಶ್ರೀರಂಗಪಟ್ಟಣ ತಾಲೂಕಿನಲ್ಲಿ ಬೆಳಗೊಳ, ಗಾಮನಹಳ್ಳಿ, ನೀಲನಕೊಪ್ಪಲು, ಮರಳಗಾಲ, ನಾಗಮಂಗಲ ತಾಲೂಕಿನಲ್ಲಿ ಹೊನ್ನೇನಹಳ್ಳಿ, ಶಿಖರನಹಳ್ಳಿ, ಅಲ್ಪಹಳ್ಳಿ ಹಾಗೂ ಕೆ.ಆರ್.ಪೇಟೆ ತಾಲೂಕಿನ ಚಿಕ್ಕೋನಹಳ್ಳಿ, ಕಾಮನಹಳ್ಳಿ, ಪೂವನಹಳ್ಳಿ, ಪುರ ಗ್ರಾಪಂ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಚುನಾವಣೆ ನಡೆಸಲು 30 ಚುನಾವಣಾಧಿಕಾರಿ ಹಾಗೂ 30 ಸಹಾಯಕ ಚುನಾವಣಾಧಿಕಾರಿಯನ್ನು ನೇಮಕ ಮಾಡಲಾಗಿದೆ. ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಪಂ ವ್ಯಾಪ್ತಿಯಲ್ಲಿ ನ.6ರಿಂದ 26ವರೆಗೆ ಜಾರಿಯಲ್ಲಿರುತ್ತದೆ. ಗ್ರಾಪಂನ ಎಲ್ಲ ಸ್ಥಾನಗಳಿಗೆ ಚುನಾವಣೆ ನಡೆಯದ ಸಂದರ್ಭದಲ್ಲಿ ಅಥವಾ ಅವಿರೋಧ ಆಯ್ಕೆಯಾಗಿ ಚುನಾವಣಾಧಿಕಾರಿಗಳು ಫಲಿತಾಂಶ ಘೋಷಿಸಿದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದು ರದ್ದಾಗಲಿದೆ. ನೀತಿ ಸಂಹಿತೆಯು ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ನಗರ ಪಾಲಿಕೆ ಹಾಗೂ ಮಹಾನಗರ ಪಾಲಿಕೆ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ.
ಇದು ಪಕ್ಷ ರಹಿತ ಚುನಾವಣೆಯಾಗಿದ್ದು, ಮತಪತ್ರಗಳ ಮೂಲಕ ಮತದಾನ ನಡೆಯಲಿದೆ. ನೀತಿ ಸಂಹಿತೆ ಜಾರಿಯಲ್ಲಿರುವ ಪ್ರದೇಶದಲ್ಲಿ ಮತದಾನವು ಮುಕ್ತಾಯಗೊಳ್ಳುವ 48 ಗಂಟೆ ಮೊದಲಿನ ಅವಧಿಯಲ್ಲಿ ಎಲ್ಲ ಮದ್ಯದಂಗಡಿ ಮತ್ತು ಮದ್ಯ ತಯಾರಿಕಾ ಘಟಕವನ್ನು ಅದರ ಮಾಲೀಕರು ಮುಚ್ಚಬೇಕೆಂದು ಡಿಸಿ ಆದೇಶಿಸಿದ್ದಾರೆ.