

ಬೆಂಗಳೂರು: ಆನ್ಲೈನ್ ಶಿಕ್ಷಣಕ್ಕೆ ಮಾರ್ಗಸೂಚಿ ರಚಿಸಿದ್ದರೂ ಕೆಲ ಶಿಕ್ಷಣ ಸಂಸ್ಥೆಗಳು ಹಗಲು-ರಾತ್ರಿ ಎನ್ನದೇ ಮನಸೋಇಚ್ಛೆ ತರಗತಿಗಳನ್ನು ನಡೆಸುತ್ತಿದ್ದು, ಬೋಧನಾ ಅವಧಿ ನಿಗದಿಪಡಿಸಿ ಮಕ್ಕಳ ಆರೊಗ್ಯದ ಮೇಲೆ ಪರಿಣಾಮವಾಗದಂತೆ ಎಚ್ಚರ ವಹಿಸಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಸಮಗ್ರ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಆನ್ಲೈನ್ ಶಿಕ್ಷಣ ಸೂಚನೆಗಳ ಅನುಷ್ಠಾನ ವಿಚಾರವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಯಾವುದೇ ಶಾಲೆಗಳಿರಲಿ ತಮಗೆ ತೋಚಿದ ಅವಧಿಯಲ್ಲಿ ಆನ್ಲೈನ್ ಪಾಠ ಮಾಡಲು ಅವಕಾಶ ನೀಡಲಾಗದು. ತಜ್ಞರ ಸಮಿತಿ ನಿಗದಿಪಡಿಸಿರುವ ಸಮಯದಲ್ಲಷ್ಟೇ ಪಾಠ ಮಾಡಬೇಕು. ಹಾಗೆಯೇ ಆನ್ಲೈನ್ ಶಾಲಾವಧಿ ಯನ್ನು ನಿಗದಿಪಡಿಸಿ ಸುತ್ತೋಲೆ ಹೊರಡಿಸಿ, ಈ ಕುರಿತು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಬೇಕೆಂದು ಸಚಿವರು ಆಯುಕ್ತರಿಗೆ ನಿರ್ದೇಶನ ನೀಡಿದರು.
ಪಾಲಕರು ದೂರು ನೀಡಬಹುದು: ಜಿಲ್ಲೆ, ತಾಲೂಕು, ಬಿಆರ್ಸಿ, ಸಿಆರ್ಪಿ ಮಟ್ಟದಲ್ಲಿ ಶಾಲಾ ವಧಿಯನ್ನು ಗಮನಿಸಲು ಅಗತ್ಯ ಕ್ರಮ ವಹಿಸಬೇಕು. ಹಾಗೆಯೇ ಆನ್ಲೈನ್ ಶಿಕ್ಷಣ ನಿರ್ವಹಣೆಗೆ ಸಂಬಂಧಿಸಿದಂತೆ ಪಾಲಕರ-ಸಾರ್ವಜನಿಕರ ಯಾವುದೇ ದೂರುಗಳಿದ್ದರೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣವಾಣಿ-ಸಾರ್ವಜನಿಕ ಸಹಾಯವಾಣಿಗೆ (18004257302) ಕರೆ ಮಾಡಬಹುದು. ಇಲ್ಲವೆ, ಸಹಾಯವಾಣಿ ವಾಟ್ಸ್ಆಪ್ ಸಂಖ್ಯೆ 9483045130 ದೂರು ಸಲ್ಲಿಸಿ ಇಲಾಖೆಯ ಗಮನಕ್ಕೆ ತರುವಂತೆ ಸಚಿವರು ಹೇಳಿದರು. ಇಂತಹ ದೂರುಗಳನ್ನು ನಿರ್ವಹಿಸಲು ಕೂಡಲೇ ಆಯುಕ್ತರ ಕಚೇರಿ ಮತ್ತು ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರ ಹಂತದಲ್ಲಿ ಒಬ್ಬೊಬ್ಬ ನೋಡಲ್ ಅಧಿಕಾರಿ ನೇಮಿಸಬೇಕು. ಬೆಂಗಳೂರು, ಕಲಬುರಗಿ, ಬೆಳಗಾವಿ, ಮಂಗಳೂರು, ಹುಬ್ಬಳ್ಳಿ- ಧಾರವಾಡ ಸೇರಿ ಹಲವು ನಗರ ಕೇಂದ್ರಿತ ಪ್ರದೇಶಗಳಲ್ಲಿ ಇಂತಹ ದೂರುಗಳು ಹೆಚ್ಚಾಗಿವೆ. ಅಧಿಕಾರಿಗಳು ಆನ್ಲೈನ್ ಶಿಕ್ಷಣದಲ್ಲಿನ ಸಮಸ್ಯೆ ಮತ್ತು ದೂರುಗಳನ್ನು ಪರಿಶೀಲಿಸಿ ಸಾರ್ವಜನಿಕರಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಸಲಹೆ- ಸೂಚನೆಗಳನ್ನು ನೀಡಬೇಕೆಂದು ಇಲಾಖೆ ಆಯುಕ್ತರಿಗೆ ಸಚಿವರು ಸೂಚಿಸಿದರು.
ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಆರಂಭಕ್ಕೆ ಆತುರದ ನಿರ್ಧಾರ ಕೈಗೊಂಡರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಸಮುದಾಯದ ಮಾರಣಹೋಮಕ್ಕೆ ನಾಂದಿ ಹಾಡಿದಂತಾಗುತ್ತದೆ, ಹುಷಾರ್! | ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ
ಕ್ವಾರಂಟೈನ್ ಅವಧಿಯನ್ನು ರಜೆಯಾಗಿ ಪರಿಗಣಿಸಲು ಮನವಿ
ಕರೊನಾ ಸೋಂಕು ಬಾಧಿತ ನೌಕರ ಇಲ್ಲವೇ ಕಾರ್ವಿುಕರು ಕ್ವಾರಂಟೈನ್ನಲ್ಲಿ ಇರುವ ಅವಧಿಯನ್ನು ರಜೆ ಎಂದು ಪರಿಗಣಿಸ ಬೇಕು ಎಂದು ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳ ಉದ್ಯೋಗ ದಾತರಿಗೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಈ ಮನವಿಗೆ ಖಾಸಗಿ ಉದ್ಯಮ/ ಸಂಸ್ಥೆಗಳ ಮಾಲೀಕರು ಸಕಾರಾತ್ಮಕವಾಗಿ ಸ್ಪಂದಿಸಿದರೆ, ಕ್ವಾರಂಟೈನ್ ನಲ್ಲಿದ್ದ ಸೋಂಕಿತ ಕಾರ್ವಿುಕ ಅಥವಾ ನೌಕರ ಮತ್ತು ಅವಲಂಬಿತ ಕುಟುಂಬಗಳು ನಿರಾಳವಾಗಲಿವೆ.
ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಿ ಕಾಲೇಜು ಪ್ರಾರಂಭಿಸಿ, ವಸತಿನಿಲಯಗಳಲ್ಲಿ ತಂಗಲು ಕರೊನಾ ನಿಯಮಾನುಸಾರ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಶೇ.50 ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಲಾಗುವುದು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೆಟ್ರಿಕ್ ಪೂರ್ವ ವಸತಿನಿಲಯಗಳನ್ನು ಬಳಸಲಾಗುವುದು. ವಿದ್ಯಾರ್ಥಿಗಳಿಗೆ ವೈ-ಫೈ ಮೂಲಕ ಆನ್ಲೈನ್ ಶಿಕ್ಷಣ ನೀಡಲು ಲ್ಯಾಪ್ಟ್ಯಾಪ್ ನೀಡುವ ಚಿಂತನೆ ಇದೆ. | ಶ್ರೀರಾಮಲು ಸಮಾಜ ಕಲ್ಯಾಣ ಸಚಿವ
ಫೆಬ್ರವರಿ-ಮಾರ್ಚ್ಗೆ ಎರಡನೇ ಅಲೆ
ಬೆಂಗಳೂರು: ರಾಜ್ಯದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ಕರೊನಾ ಸೋಂಕಿನ ಎರಡನೇ ಅಲೆ ಅಪ್ಪಳಿಸಬಹುದೆಂದು ತಜ್ಞರ ತಂಡ ಎಚ್ಚರಿಕೆ ನೀಡಿದೆ. ಸರ್ಕಾರ ತಜ್ಞರ ಜತೆ ನಡೆಸಿದ ಚರ್ಚೆ ಸಂದರ್ಭದಲ್ಲಿ ಮುಂದಿನ ಮೂರು ತಿಂಗಳು ಎಚ್ಚರಿಕೆ ಅಗತ್ಯವೆಂದು ಹೇಳಿದ್ದಾರೆ. ದೆಹಲಿ ಹಾಗೂ ಕೇರಳದಲ್ಲಿ ಕರೊನಾ ಹೆಚ್ಚಾಗಿ ನಂತರ ಕಡಿಮೆಯಾಗಿತ್ತು. ಆನಂತರ ಹೆಚ್ಚಾಗಲು ತೆಗೆದುಕೊಂಡ ಅವಧಿಯ ಆಧಾರದ ಮೇಲೆ ರಾಜ್ಯದಲ್ಲಿ ಫೆಬ್ರವರಿ ಅಂತ್ಯ ಅಥವಾ ಮಾರ್ಚ್ಗೆ ಹೆಚ್ಚಾಗಬಹುದೆಂದು ತಿಳಿಸಿದ್ದಾರೆ.
ಎಲ್ಲೆಲ್ಲಿ ಎಚ್ಚರಿಕೆ: ಇತ್ತೀಚೆಗೆ ಉಪಚುನಾವಣೆ ನಡೆದ ಶಿರಾ ಹಾಗೂ ಆರ್.ಆರ್.ನಗರ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಆ ಮೂಲಕ ಸೋಂಕು ಸರಪಳಿಯನ್ನು ಕತ್ತರಿಸಬೇಕು. ಗ್ರಾ.ಪಂ. ಚುನಾವಣೆಗಳನ್ನು ಮುಂದೂಡ ಬೇಕು. ದೀಪಾವಳಿ ಸಂದರ್ಭ ಜನ ದಟ್ಟಣೆಯಾಗದಂತೆ ಕ್ರಮ ಕೈಗೊಳ್ಳಬೇಕು. ಕ್ರಿಸ್ವುಸ್ ಹಾಗೂ ಹೊಸ ವರ್ಷದ ಆಚರಣೆ ವೇಳೆ ಜನ ಗುಂಪು ಸೇರುವುದನ್ನು ನಿಷೇಧ ಮಾಡಬೇಕು ಎಂಬ ಸಲಹೆ ನೀಡಿದ್ದಾರೆಂದು ಮೂಲಗಳು ಸ್ಪಷ್ಟಪಡಿಸಿವೆ.
ಖಾಸಗಿ ಶಾಲೆಗಳ ಅಭಿಪ್ರಾಯ ಸಂಗ್ರಹ
ಶಾಲಾ ಆರಂಭದ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಸರಣಿ ಸಭೆಗಳನ್ನು ನಡೆಸುತ್ತಿರುವ ಶಿಕ್ಷಣ ಇಲಾಖೆ ಶುಕ್ರವಾರ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಜತೆಗೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿತು. ಕರ್ನಾಟಕ ಖಾಸಗಿ ಅನುದಾನರಹಿತ ಶಾಲಾಡಳಿತ ಮಂಡಳಿಗಳ ಸಂಘ (ಕುಸ್ಮಾ), ಸಿಬಿಎಸ್ಇ ಹಾಗೂ ಐಸಿಎಸ್ಇ ಶಾಲಾಡಳಿತ ಮಂಡಳಿಗಳ ಪ್ರತಿನಿಧಿಗಳು, ಕರ್ನಾಟಕ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್್ಸ) ಸೇರಿ ವಿವಿಧ ಖಾಸಗಿ ಶಾಲಾಡಳಿತ ಮಂಡಳಿಗಳ ಜತೆಗೆ ಇಲಾಖೆ ಆಯುಕ್ತ ಅನ್ಬುಕುಮಾರ್ ಸಭೆ ನಡೆಸಿ, ಶಾಲಾರಂಭ ಹೇಗೆ ಮಾಡಬಹುದು ಎಂಬುದರ ಬಗ್ಗೆ ಅಭಿಪ್ರಾಯವನ್ನು ಸಂಗ್ರಹಿಸಿದರು. ಇದೇ ವೇಳೆ ಖಾಸಗಿ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡಿ, ಶಾಲಾರಂಭದ ಬಗ್ಗೆ ನಿರ್ಧಾರ ಮಾಡಬೇಕು. ಹಾಗೆಯೇ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹದಿಂದ ಹಾನಿಯಾಗಿರುವ ಖಾಸಗಿ ಶಾಲೆಗಳಿಗೆ ವಿಶೇಷ ಆರ್ಥಿಕ ಅನುದಾನ ಒದಗಿಸಿ, ಮೂಲಸೌಕರ್ಯಕ್ಕೆ ವ್ಯವಸ್ಥೆ ಮಾಡಬೇಕು ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಮನವಿ ಸಲ್ಲಿಸಿದವು.
ಎನ್ಇಪಿ ವರದಿ ಸಲ್ಲಿಕೆ
ಕೇಂದ್ರದ ನೂತನ ಶಿಕ್ಷಣ ನೀತಿ ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಇಡೀ ರಾಷ್ಟ್ರದಲ್ಲಿ ಮೊದಲನೇ ರಾಜ್ಯವಾಗಲಿದ್ದು, ರಾಜ್ಯದಲ್ಲಿ ನೂತನ ಶಿಕ್ಷಣ ನೀತಿಯ ಅಳವಡಿಕೆಗೆ ಸಂಬಂಧಿಸಿದಂತೆ ನೇಮಿಸಲಾದ ತಜ್ಞರ ಸಮಿತಿ ನ.7ರಂದು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಸಚಿವ ಎಸ್.ಸುರೇಶ್ಕುಮಾರ್ ತಿಳಿಸಿದರು.