ಸ್ಕೀಮ್ ಹೆಸರಿನಲ್ಲಿ ವಂಚಿಸುತ್ತಿದ್ದವರು ಸೆರೆ

scheam
Published on

ಮಡಿಕೇರಿ:

ಸ್ಕೀಮ್ ಹೆಸರಿನಲ್ಲಿ ಅನಧಿಕೃತವಾಗಿ ಹಣ ಸಂಗ್ರಹಿಸುತ್ತಿದ್ದ ಮಡಿಕೇರಿಯ ನಾಲ್ವರು ಮತ್ತು ಮಂಗಳೂರಿನ ಓರ್ವನನ್ನು ಮಡಿಕೇರಿ ಪೊಲಿಸರು ಶನಿವಾರ (ಫೆ.15) ಬಂಧಿಸಿರುವುದಾಗಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ. ಮಂಗಳೂರಿನ ಸುರತ್ಕಲ್ ಕೃಷ್ಣಾಪುರದ ಮಹಮ್ಮದ್ ಆಶ್ರಫ್ (37), ಮಡಿಕೇರಿ ಮಲ್ಲಿಕಾರ್ಜುನ ನಗರದ ಎಂ.ವೈ. ಸುಲೈಮಾನ್ (37), ಮಡಿಕೇರಿ ತ್ಯಾಗರಾಜ ಕಾಲೋನಿಯ ಅಬ್ದುಲ್ ಗಫೂರ್ (34), ಮೊಹಮ್ಮದ್ ಅಕ್ರಂ (34) ಹಾಗೂ ಮಡಿಕೇರಿ ಕುಂಬಳಕೇರಿ ಉಕ್ಕುಡದ ಹೆಚ್.ಎನ್. ಕಿಶೋರ್ (41) ಬಂಧಿತ ಆರೋಪಿಗಳಾಗಿದ್ದಾರೆ.

ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಣಿಪೇಟೆಯಲ್ಲಿ ಈ ವರ್ಷದ ಜ.30ರಿಂದ ಎಸ್‌ವಿ ಸ್ಮಾರ್ಟ್ ವಿಷನ್ ಎಂಬ ಹೆಸರಿನಲ್ಲಿ ಹಣವನ್ನು ಸಂಗ್ರಹಿಸುತ್ತಿದ್ದು ಈ ಸ್ಕೀಮ್‌ನಲ್ಲಿ ಈಗಾಗಲೇ 1,100 ಕ್ಕೂ ಹೆಚ್ಚು ಜನರು ಸೇರಿದ್ದಾರೆ. ಈ ಸ್ಕೀಂಗೆ ಸೇರಲು ಪ್ರತಿ ಗ್ರಾಹಕನೂ ಪ್ರತಿ ತಿಂಗಳು 1 ಸಾವಿರ ರೂ.ಗಳಂತೆ 24 ಕಂತುಗಳನ್ನು ಕಟ್ಟಬೇಕು. ಪ್ರತಿ ತಿಂಗಳ 30ನೇ ತಾರೀಕು ಸಂಜೆ 5 ಗಂಟೆಗೆ ರಾಣಿಪೇಟೆಯಲ್ಲಿರುವ ಗೆಜ್ಜೆ ಸಂಗಪ್ಪ ಕಲ್ಯಾಣ ಮಂಟಪದಲ್ಲಿ ಲಕ್ಕಿ ಡ್ರಾ ಮಾಡಿ ಫಲಿತಾಂಶವನ್ನು ವಾಟ್ಸ್ ಆಪ್ ಗ್ರೂಪ್ ಮೂಲಕ ತಿಳಿಸಿ ಬಹುಮಾನವನ್ನು 50-60 ದಿನಗಳಲ್ಲಿ ಗ್ರಾಹಕರಿಗೆ ನೀಡಲಾಗುವುದು. 20 ತಿಂಗಳ ಲಕ್ಕಿ ಡ್ರಾನಲ್ಲಿ ಒಟ್ಟು 96 ಜನರಿಗೆ ವಿವಿಧ ರೀತಿಯ ಬಹುಮಾನವನ್ನು ನೀಡಲಾಗುವುದು ಎಂದು ಆರೋಪಿಗಳು ತಿಳಿಸಿದ್ದರು ಎಂದು ಎಸ್‌ಪಿ ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೊದಲನೇ ತಿಂಗಳ ಬಹುಮಾನವಾಗಿ ಒಬ್ಬರಿಗೆ ಥಾರ್ ಜೀಪ್ ಹಾಗೂ 8 ಜನರಿಗೆ ಬೈಕ್ ನೀಡಬೇಕಾಗಿದ್ದು, ಥಾರ್ ಜೀಪ್ ಬದಲಾಗಿ 7.60 ಲಕ್ಷರೂ., ಮತ್ತು 7 ಜನರಿಗೆ ತಲಾ 43 ಸಾವಿರ ರೂ. ಚೆಕ್ ನೀಡಿದ್ದಾರೆ.

ಇವರು ಯಾವುದೇ ಅಧಿಕೃತ ದಾಖಲಾತಿಗಳನ್ನು ಹೊಂದದೆ, ವಂಚನೆ ಮಾಡುವ ಉದ್ದೇಶದಿಂದ ಗ್ರಾಹಕರಿಂದ ಹಣವನ್ನು ಸಂಗ್ರಹಿಸುತ್ತಿದ್ದ ಹಿನ್ನೆಲೆಯಲ್ಲಿ ಸ್ಕೀಮ್ ಪ್ರತಿನಿಧಿಗಳಾದ ಅಶ್ರಫ್, ಸುಲೈಮಾನ್, ಅಬ್ದುಲ್ ಗಫೂರ್, ಅಕ್ರಮ್ ಹಾಗೂ ಕಿಶೋರ್ ವಿರುದ್ಧ ದೂರು ದಾಖಲಿಸಿಕೊಂಡು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಮಡಿಕೇರಿ ಉಪ ವಿಭಾಗದ ಡಿಎಸ್‌ಪಿ ಪಿ.ಎ. ಸೂರಜ್, ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ಕೆ. ರಾಜು, ಪಿಎಸ್‌ಐ ಸಿ.ಎ. ಶ್ರೀಧರ್À, ರಾಧಾ, ಮಡಿಕೇರಿ ನಗರ ಪೊಲೀಸ್ ಠಾಣೆ ಹಾಗೂ ಅಪರಾಧ ಪತ್ತೆ ಸಿಬ್ಬಂದಿ ಈ ಪ್ರಕರಣದ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿಸಿರುವ ಎಸ್‌ಪಿ ಈ ಸ್ಕೀಮ್‌ನಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾದವರು ಸೂಕ್ತ ದಾಖಲಾತಿಗಳೊಂದಿಗೆ ಮಡಿಕೇರಿ ನಗರ ಪೊಲೀಸ್ ಠಾಣೆಗೆ ಹಾಜರಾಗುವಂತೆ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net